ರಾಮಾಯಣ– ಮಹಾಭಾರತ ಕುರಿತು ಪರೀಕ್ಷೆ

7

ರಾಮಾಯಣ– ಮಹಾಭಾರತ ಕುರಿತು ಪರೀಕ್ಷೆ

Published:
Updated:

ಕೋಲಾರ: ‘ಆಧುನಿಕತೆಯ ದಾಳಿಯಿಂದ ರಾಮಾಯಣ ಹಾಗೂ ಮಹಾಭಾರತದ ವಿಚಾರಗಳು ಕಣ್ಮರೆಯಾಗುತ್ತಿವೆ. ಈ ವಿಚಾರಧಾರೆಯ ಉಳಿವಿಗಾಗಿ ರಾಮಾಯಣ ಮತ್ತು ಮಹಾಭಾರತ ಕುರಿತು ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಭಾರತ ಸಂಸ್ಕೃತಿ ಪ್ರತಿಷ್ಠಾನದ ಜಿಲ್ಲಾ ಸಂಚಾಲಕ ಜೆ.ಜಿ.ನಾಗರಾಜ್ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪುರಾಣದ ಪುನರ್‍ಮನನಕ್ಕಾಗಿ ಪರೀಕ್ಷೆ ನಡೆಸಲಾಗುತ್ತಿದ್ದು. ಈಗಾಗಲೇ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 15 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿವೆ. ವಿದ್ಯಾರ್ಥಿಗಳ ಜತೆಗೆ ಪೋಷಕರು ಪುಸ್ತಕ ಕೊಂಡು ಓದುತ್ತಿದ್ದಾರೆ’ ಎಂದರು.

‘ದೇಶದ ಸಂಸ್ಕೃತಿ ಮತ್ತು ಸಾಹಿತ್ಯ ಒಳಗೊಂಡಿರುವ ರಾಮಾಯಣ ಹಾಗೂ ಮಹಾಭಾರತವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಷ್ಠಾನವು 1972ರಿಂದ ಪರೀಕ್ಷೆ ನಡೆಸಿಕೊಂಡು ಬರುತ್ತಿದೆ. ಮೊಬೈಲ್ ಹಾಗೂ ಟಿ.ವಿ ಹಾವಳಿಯಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಓದಿನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ, ಆಂಗ್ಲಭಾಷೆ, ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಆಯೋಜನೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಹಾಗೂ ಉಡುಪಿ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯನ್ನು ಈ ಬಾರಿ ಪ್ರಥಮ ಸ್ಥಾನಕ್ಕೇರಿಸಲು ಸರ್ವ ಪ್ರಯತ್ನ ಮಾಡುತ್ತಿದ್ದು, ಪ್ರೌಢ ಶಾಲಾ ಶಿಕ್ಷಕರು, ಪಿಯುಸಿ ಕಾಲೇಜು ಉಪನ್ಯಾಸಕರು, ಪೋಷಕರು ಸಹಕರಿಸಬೇಕು’ ಎಂದು ಕೋರಿದರು.

ಶೇ 98ರಷ್ಟು ಉತ್ತೀರ್ಣ: ‘ಪ್ರತಿ ವರ್ಷ ನ.17ರಂದು ಪರೀಕ್ಷೆ ನಡೆಯುತ್ತದೆ. ಹಿಂದಿನ ವರ್ಷದ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 6,500 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಶೇ 98ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ’ ಎಂದು ಪ್ರತಿಷ್ಠಾನದ ಜಿಲ್ಲಾ ಸಂಯೋಜಕ ರಾಮಣ್ಣ ವಿವರಿಸಿದರು.

‘ಜಿಲ್ಲೆಯಲ್ಲಿ ಈ ಬಾರಿ 10 ಸಾವಿರ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸುವ ಗುರಿ ಇದೆ. ಪರೀಕ್ಷಾ ಶುಲ್ಕ ₹ 30 ಮತ್ತು ಪುಸ್ತಕಕ್ಕೆ ₹ 30 ಇದೆ. ಶುಲ್ಕ ಪ್ರಮಾಣ ಕಡಿಮೆಯಿದ್ದು, ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗುವುದಿಲ್ಲ. ಪರೀಕ್ಷೆ ಸಂಬಂಧ ಎಲ್ಲಾ ಪ್ರೌಢ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ಮಾಹಿತಿ ನೀಡಲಾಗುತ್ತದೆ’ ಎಂದು ತಿಳಿಸಿದರು.

ಚಿನ್ನದ ಪದಕ: ‘ನಗರದ ಮಹಿಳಾ ಸಮಾಜ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿ.ಲಾವಣ್ಯ ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕ ಪಡೆದಿದ್ದರು. ಮಾಲೂರು ತಾಲ್ಲೂಕಿನ ಬನಹಳ್ಳಿಯ ವಿ.ಲಾವಣ್ಯ ಪ್ರಸ್ತುತ ದ್ವಿತೀಯ ಪಿಯುಸಿ ಓದುತ್ತಿದ್ದು, ಈ ಬಾರಿ ರಾಮಾಯಣ ಪರೀಕ್ಷೆ ಬರೆಯಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರತಿಷ್ಠಾನದ ಜಿಲ್ಲಾ ಸಂಯೋಜಕರಾದ ಆರ್ಮುಗಮ್‌, ದಿವಾಕರ್, ನಾರಾಯಣಪ್ಪ, ಶ್ರೀಧರ್‌ರಾಮ್, ವರಲಕ್ಷ್ಮಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !