ಶನಿವಾರ, ಮಾರ್ಚ್ 6, 2021
29 °C

ಆಪರೇಷನ್ ಕಮಲ ವಿಚಾರ: ರಮೇಶ್‌ಕುಮಾರ್‌ ಡೀಲ್ ಮನುಷ್ಯರಲ್ಲ ಎಂದ ಕೆ.ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಡೀಲ್ ಮನುಷ್ಯರಲ್ಲ. ಅವರು ಡೀಲ್ ಮಾಡಿಸುವಂತಹ ವ್ಯಕ್ತಿ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ಪೀಕರ್‌ ರಮೇಶ್‌ಕುಮಾರ್‌ಗೆ ₹ 50 ಕೋಟಿ ಕೊಟ್ಟು ಬುಕ್ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ. ರಮೇಶ್‌ಕುಮಾರ್‌ ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವರಲ್ಲ. ಅಂತಹವರ ಬಗ್ಗೆ ಯಡಿಯೂರಪ್ಪ ಯಾವ ಬಾಯಿ ಇಟ್ಟುಕೊಂಡು ಮಾತನಾಡಿದ್ದಾರೊ ಗೊತ್ತಿಲ್ಲ’ ಎಂದು ಕಿಡಿಕಾರಿದರು.

‘ರಮೇಶ್‌ಕುಮಾರ್‌ ಮೇಧಾವಿ ಸ್ಪೀಕರ್. ಗೌರವ, ರಾಜಕೀಯ ಚಾಣಕ್ಷತನ ಹೊಂದಿದ್ದಾರೆ. ಅವರು ಎಲ್ಲಾ ಪಕ್ಷಗಳನ್ನು ಒಂದೇ ದೃಷ್ಟಿಯಿಂದ ನೋಡುತ್ತಾರೆ. ಅವರ ನಡವಳಿಕೆ ಪ್ರಶಂಸನೀಯ. ಯಾವುದೋ ಕಾರಣಕ್ಕೆ ಯಡಿಯೂರಪ್ಪ ಸ್ಪೀಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದರೆ. ಇದು ಮಹಾ ತಪ್ಪು’ ಎಂದರು.

‘ನಾನು ನಾಲ್ಕು ಬಾರಿ ಶಾಸಕನಾಗಿದ್ದು, ರಮೇಶ್‌ಕುಮಾರ್‌ ಅವರನ್ನು 2 ಬಾರಿ ಸ್ಪೀಕರ್ ಸ್ಥಾನದಲ್ಲಿ ನೋಡಿದ್ದೇನೆ. ಅವರನ್ನು ಬುಕ್ ಮಾಡಿದ್ದೇವೆ ಎಂದು ಹೇಳುವುದು ಸರಿಯಲ್ಲ. ಅಂತಹ ಕೆಳ ಮಟ್ಟಕ್ಕಿಳಿಯುವ ರಾಜಕಾರಣ ಅವರೆಂದೂ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಇಂದಿನ ರಾಜಕೀಯ ಸನ್ನಿವೇಶದಲ್ಲಿ ರಮೇಶ್‌ಕುಮಾರ್‌ ಡೀಲ್ ಮಾಡುತ್ತಾರೆ. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಅವರು ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತಾರೆ. ಅವರೇ ನಮಗೆ ಮೇಷ್ಟ್ರು, ಅವರ ಕಾರ್ಯ ಪ್ರವೃತ್ತಿ ಮಾದರಿಯಾದದ್ದು’ ಎಂದು ಸ್ಮರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು