ಮಂಗಳವಾರ, ನವೆಂಬರ್ 12, 2019
28 °C

ಅತ್ಯಾಚಾರ: 20 ವರ್ಷ ಜೈಲು

Published:
Updated:

ಕೋಲಾರ: ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಸಂಬಂಧ ಇಲ್ಲಿನ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರಿಗೆ ತಲಾ 20 ವರ್ಷ ಜೈಲು ಶಿಕ್ಷೆ ಹಾಗೂ ₹ 35 ಸಾವಿರ ದಂಡ ವಿಧಿಸಿದೆ.

ಕೋಲಾರದ ಸಾಬೀರ್ ಅಹಮ್ಮದ್ ಮತ್ತು ಇಮ್ತಿಯಾಜ್‌ ಪಾಷಾ ಶಿಕ್ಷೆಗೆ ಗುರಿಯಾದವರು. ಇವರು 2016 ಸೆ.24ರಂದು ಗಲ್‌ಪೇಟೆಯ ಯುವತಿಯನ್ನು ಆಧಾರ್ ಕಾರ್ಡ್ ಮಾಡಿಸಿಕೊಡುವ ಸೋಗಿನಲ್ಲಿ ತಹಶೀಲ್ದಾರ್‌ ಕಚೇರಿಗೆ ಕರೆಸಿಕೊಂಡು ಬೈಕ್‌ನಲ್ಲಿ ಅಪಹರಿಸಿದ್ದರು. ಮತ್ತು ಬರುವ ಔಷಧವನ್ನು ತಂಪು ಪಾನೀಯದಲ್ಲಿ ಬೆರೆಸಿ ಯುವತಿಗೆ ಕುಡಿಸಿ ಅತ್ಯಾಚಾರ ಎಸಗಿದ್ದರು.

ಈ ಸಂಬಂಧ ಗಲ್‌ಪೇಟೆ ಪೊಲೀಸರು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಪಹರಣ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಸಾಬೀರ್‌ ಮತ್ತು ಇಮ್ತಿಯಾಜ್‌ನನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಶನಿವಾರ ಇಬ್ಬರಿಗೂ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಸಂತ್ರಸ್ತ ಯುವತಿ ಪರ ಸರ್ಕಾರಿ ಅಭಿಯೋಜಕಿ ಸುಮತಿ ಶಾಂತಮೇರಿ ವಾದ ಮಂಡಿಸಿದ್ದರು.

ಅತ್ಯಾಚಾರಿಗೆ ಜೈಲು ಶಿಕ್ಷೆ

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಅಲ್ತಾಫ್‌ ಎಂಬಾತನಿಗೆ ಇಲ್ಲಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಮತ್ತು ₹ 20 ಸಾವಿರ ದಂಡ ವಿಧಿಸಿದೆ.

ಮುಳಬಾಗಿಲಿನ ಅಲ್ತಾಫ್ 2018ರ ಅ.26ರಂದು ಬಾಲಕಿಯನ್ನು ಅಪಹರಿಸಿ ಚಾಮರಾಜನಗರಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಮುಳಬಾಗಿಲು ಪೊಲೀಸರು ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಪಹರಣ ಆರೋಪದಡಿ ಪ್ರಕರಣ ದಾಖಲಿಸಿ ಅಲ್ತಾಫ್‌ನನ್ನು ಬಂಧಿಸಿದ್ದರು.

ಅಲ್ತಾಫ್‌ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಬಿ.ಎಸ್.ರೇಖಾ ಶಿಕ್ಷೆ ವಿಧಿಸಿ ಶನಿವಾರ ಆದೇಶ ಹೊರಡಿಸಿದರು. ಸಂತ್ರಸ್ತ ಬಾಲಕಿ ಪರ ಅಭಿಯೋಜಕ ಎಸ್.ಮುನಿಸ್ವಾಮಿಗೌಡ ವಾದ ಮಂಡಿಸಿದ್ದರು.

ಕೊಲೆ: ಜೀವಾವಧಿ ಶಿಕ್ಷೆ

ಕೊಲೆ ಪ್ರಕರಣ ಸಂಬಂಧ ಇಲ್ಲಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂರು ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 15 ಸಾವಿರ ದಂಡ ವಿಧಿಸಿದೆ.

ಬಂಗಾರಪೇಟೆ ತಾಲ್ಲೂಕಿನ ಪಂತನಹಳ್ಳಿ ಗ್ರಾಮದ ಶಿವಪ್ಪ, ಚೌಡಪ್ಪ ಹಾಗೂ ನಾಗರಾಜಪ್ಪ ಶಿಕ್ಷೆಗೆ ಗುರಿಯಾದವರು. ಈ ಮೂರು ಮಂದಿ ಜಮೀನು ವಿಚಾರವಾಗಿ 2017ರ ಏ.16ರಂದು ಪಂತನಹಳ್ಳಿಯಲ್ಲಿ ಮುನಿವೆಂಕಟಪ್ಪ ಎಂಬುವರನ್ನು ಕಾರಿನಲ್ಲಿ ಅಪಹರಿಸಿ ಆಂಧ್ರಪ್ರದೇಶದ ವಿಕೋಟ ಸಮೀಪಕ್ಕೆ ಎಳೆದೊಯ್ದು ಬೆಂಕಿ ಹಚ್ಚಿ ಕೊಲೆ ಮಾಡಲೆತ್ನಿಸಿದ್ದರು.

ತೀವ್ರ ಸುಟ್ಟ ಗಾಯಗಳಾಗಿ ಅಸ್ವಸ್ಥಗೊಂಡಿದ್ದ ಮುನಿವೆಂಕಟಪ್ಪ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಹೇಳಿಕೆ ಆಧರಿಸಿ ಬೇತಮಂಗಲ ಪೊಲೀಸರು ಶಿವಪ್ಪ, ಚೌಡಪ್ಪ ಹಾಗೂ ನಾಗರಾಜಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಶಿಕ್ಷೆ ವಿಧಿಸಿ ಶನಿವಾರ ಆದೇಶ ಹೊರಡಿಸಿದರು. ಪ್ರಕರಣ ಸಂಬಂಧ ಸರ್ಕಾರ ಅಭಿಯೋಜಕ ಗಣಪತಿ ವಾದ ಮಂಡಿಸಿದ್ದರು.

ಕೊಲೆ ಯತ್ನ: 10 ವರ್ಷ ಜೈಲು

ಕೊಲೆ ಯತ್ನ ಪ್ರಕರಣ ಸಂಬಂಧ ದಾದಾ ಫೀರ್ ಹಾಗೂ ಮುಜಾಹಿದ್‌ ಎಂಬುವರಿಗೆ ಇಲ್ಲಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ತಲಾ ₹ 15 ಸಾವಿರ ದಂಡ ವಿಧಿಸಿದೆ.

ಈ ಇಬ್ಬರು ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದಲ್ಲಿ ಮಾಂಸದ ಅಂಗಡಿ ಇಟ್ಟುಕೊಂಡಿದ್ದ ವೆಂಕಟರಮಣರೆಡ್ಡಿ ಎಂಬುವರನ್ನು ದ್ವೇಷದ ಹಿನ್ನೆಲೆಯಲ್ಲಿ 2018ರ ಆ.6ರಂದು ಕತ್ತು ಕೊಯ್ದು ಕೊಲೆ ಮಾಡಲೆತ್ನಿಸಿದ್ದರು. ಬಳಿಕ ರಾಯಲ್ಪಾಡು ಪೊಲೀಸರು ದಾದಾ ಫೀರ್‌ ಮತ್ತು ಮುಜಾಹಿದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಇಬ್ಬರಿಗೂ ಶಿಕ್ಷೆ ವಿಧಿಸಿ ಶನಿವಾರ ಆದೇಶ ಹೊರಡಿಸಿದರು. ಸರ್ಕಾರದ ಪರ ಅಭಿಯೋಜಕಿ ಸುಮತಿ ಶಾಂತಮೇರಿ ವಾದ ಮಂಡಿಸಿದ್ದರು.

ಪ್ರತಿಕ್ರಿಯಿಸಿ (+)