ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಇಪಿ ಒಪ್ಪಂದ ವಿರೋಧಿಸಿ ರಸ್ತೆತಡೆ

ರಾಸುಗಳ ಮೆರವಣಿಗೆ: ಕೇಂದ್ರದ ವಿರುದ್ಧ ರೈತ ಸಂಘ ಆಕ್ರೋಶ
Last Updated 25 ಅಕ್ಟೋಬರ್ 2019, 11:03 IST
ಅಕ್ಷರ ಗಾತ್ರ

ಕೋಲಾರ: ಕೇಂದ್ರ ಸರ್ಕಾರದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್‌ಸಿಇಪಿ) ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ರಸ್ತೆತಡೆ ಮಾಡಿ ಧರಣಿ ನಡೆಸಿದರು.

ರಾಸುಗಳೊಂದಿಗೆ ಮೆರವಣಿಗೆ ಬಂದ ಸಂಘಟನೆ ಸದಸ್ಯರು ಶ್ರೀನಿವಾಸಪುರ ಟೋಲ್‌ಗೇಟ್‌ನಲ್ಲಿ ರಸ್ತೆ ಮಧ್ಯೆ ತರಕಾರಿ ಸುರಿದು ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

‘ಆರ್‌ಸಿಇಪಿ ಒಪ್ಪಂದವು ಕೃಷಿ ಹಾಗೂ ಹೈನೋದ್ಯಮಕ್ಕೆ ಮಾರಕವಾಗಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರವು ಈ ಒಪ್ಪಂದ ಜಾರಿ ಮಾಡಿ ದೇಶದ ಹೈನೋದ್ಯಮಕ್ಕೆ ಮರಣ ಶಾಸನ ಬರೆಯಲು ಹೊರಟಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಿಡಿಕಾರಿದರು.

‘ಹೈನೋದ್ಯಮವು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ರೈತರು ಕೃಷಿಯ ಜತೆ ಉಪ ಕಸುಬಾಗಿ ಹೈನೋದ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಮೇವು ಹಾಗೂ ನೀರಿನ ಸಮಸ್ಯೆ ನಡುವೆಯೂ ರಾಸುಗಳನ್ನು ಸಾಕಿ ಬದುಕು ಸಾಗಿಸುತ್ತಿದ್ದಾರೆ. ಆರ್‌ಸಿಇಪಿ ಒಪ್ಪಂದದಡಿ ವಿದೇಶಿ ಹೈನು ಉತ್ಪನ್ನಗಳನ್ನು ದೇಶಕ್ಕೆ ಆಮದು ಮಾಡಿಕೊಂಡರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಂತರ ಮುಕ್ತ ಆರ್ಥಿಕ ನೀತಿ ಜಾರಿಯಾಗಿ ದೇಶದ ಕೃಷಿ ಕ್ಷೇತ್ರದ ಪ್ರತಿಕೂಲ ಪರಿಣಾಮವಾಗಿದೆ. ಈ ಅವೈಜ್ಞಾನಿಕ ಆರ್ಥಿಕ ನೀತಿಯು ರೈತ ಕುಲವನ್ನು ನಿರ್ನಾಮ ಮಾಡಿದೆ ಮತ್ತು ದೇಶದ ಆಹಾರ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರವು ವಿಶ್ವ ವಾಣಿಜ್ಯ ಒಪ್ಪಂದಕ್ಕಿಂತಲೂ ಅಪಾಯಕಾರಿಯಾದ ಆರ್‌ಸಿಇಪಿ ಒಪ್ಪಂದ ಜಾರಿ ಮಾಡಲು ಹೊರಟಿದೆ’ ಎಂದು ದೂರಿದರು.

ಕೇಂದ್ರಕ್ಕೆ ಅರಿವಿಲ್ಲ: ‘ದೇಶದೆಲ್ಲೆಡೆ ಹಾಲಿನ ಉತ್ಪಾದನೆ ಹೆಚ್ಚಿದೆ. ಆದರೆ, ಉತ್ಪಾದನೆಗೆ ತಕ್ಕಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲ. ಈ ಕಾರಣಕ್ಕೆ ಸಾಕಷ್ಟು ರಾಜ್ಯಗಳಲ್ಲಿ ವಾರದಲ್ಲಿ ಒಂದು ದಿನ ಹಾಲು ಖರೀದಿ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಇಪಿ ಜಾರಿಯಾದರೆ ದೇಶದ ಸುಮಾರು 150 ದಶಲಕ್ಷ ಹಾಲು ಉತ್ಪಾದಕರು ಬೀದಿ ಪಾಲಾಗುತ್ತಾರೆ. ಜತೆಗೆ ಕೃಷಿ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಕೇಂದ್ರಕ್ಕೆ ಇದರ ಅರಿವಿಲ್ಲ’ ಎಂದು ಧರಣಿನಿರತರು ಟೀಕಿಸಿದರು.

‘ಹೈನು ಉತ್ಪನ್ನಗಳನ್ನು ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರುವ ನಿರ್ಧಾರ ಕೈಬಿಡಬೇಕು. ಸೂಕ್ಷ್ಮ ವಲಯಗಳಾದ ಕೃಷಿ ಮತ್ತು ಹೈನೋದ್ಯಮವನ್ನು ಆರ್‌ಸಿಇಪಿ ಒಪ್ಪಂದಿಂದ ದೂರವಿಡಬೇಕು. ಈ ಸಂಬಂಧ ರಾಜ್ಯದ ಸಂಸದರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಸದರ ಸಭೆ ಕರೆ ಕರೆದು ಸಮಗ್ರ ಚರ್ಚೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಸಂಚಾಲಕ ಕೆ.ಶ್ರೀನಿವಾಸಗೌಡ, ಸದಸ್ಯರಾದ ಹರಿಕುಮಾರ್, ಹನುಮಯ್ಯ, ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಮಂಜುನಾಥ್, ಪ್ರತಾಪ್, ಸುಜಾತಾ, ಆಂಜಿನಪ್ಪ, ವಿಜಯಕುಮಾರಿ, ಗೀತಾ, ಪುಷ್ಪಾ, ಗಾಯಿತ್ರಿ, ಸರೋಜಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT