ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದ ಸೋಂಕು ಪ್ರಮಾಣ

ಸೋಂಕಿನ ನಾಗಾಲೋಟಕ್ಕೆ ಬೆಚ್ಚಿಬಿದ್ದ ಜಿಲ್ಲೆಯ ಜನ
Last Updated 28 ಏಪ್ರಿಲ್ 2021, 16:01 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣವು ಬುಧವಾರ ದಾಖಲೆ ಬರೆದಿದ್ದು, ಹೊಸದಾಗಿ 1,194 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.

ಸೋಂಕಿನ ನಾಗಲೋಟ ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದ್ದು, ಕೋವಿಡ್ 2ನೇ ಅಲೆಯ ಆರ್ಭಟಕ್ಕೆ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ಸರ್ವ ಪ್ರಯತ್ನದ ನಡುವೆಯೂ ಕೊರೊನಾ ಸೋಂಕಿನ ಓಟ ಮುಂದುವರಿದಿದ್ದು, ಜನ ತಬ್ಬಿಬ್ಬಾಗಿದ್ದಾರೆ.

ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾದ ಉದಾಹರಣೆಯಿಲ್ಲ. ಸೋಂಕು ಹರಡುವಿಕೆ ಸಾರ್ವಕಾಲಿಕ ದಾಖಲೆ ಬರೆದಿದ್ದು, ಕೋವಿಡ್‌ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಕೋವಿಡ್‌ ಆಸ್ಪತ್ರೆಗಳೆಲ್ಲಾ ಸೋಂಕಿತರಿಂದ ಭರ್ತಿಯಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 359 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಉಳಿದಂತೆ ಮಾಲೂರು ತಾಲ್ಲೂಕಿನಲ್ಲಿ 210 ಮಂದಿಗೆ, ಬಂಗಾರಪೇಟೆ ತಾಲ್ಲೂಕಿನ 170 ಮಂದಿಗೆ, ಕೆಜಿಎಫ್‌ ತಾಲ್ಲೂಕಿನ 120 ಮಂದಿಗೆ, ಮುಳಬಾಗಿಲು ತಾಲ್ಲೂಕಿನ 206 ಮಂದಿಗೆ ಮತ್ತು ಶ್ರೀನಿವಾಸಪುರ ತಾಲ್ಲೂಕಿನ 129 ಮಂದಿಗೆ ಸೋಂಕು ಬಂದಿದೆ. ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 3,285ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಪತ್ತೆಯಾದ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ಸೋಂಕಿತರ ಸಾವು: ಸೋಂಕಿತರ ಸಂಖ್ಯೆಯ ಹೆಚ್ಚಳದ ಬೆನ್ನಲ್ಲೇ 4 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ ಮಾಲೂರು, ಬಂಗಾರಪೇಟೆ, ಕೆಜಿಎಫ್‌ ಮತ್ತು ಮುಳಬಾಗಿಲು ತಾಲ್ಲೂಕಿನ ತಲಾ ಒಬ್ಬರು ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸೋಂಕಿತರ ಸಾವಿನ ಸಂಖ್ಯೆ 221ಕ್ಕೆ ಜಿಗಿದಿದೆ.

ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 693 ಮಂದಿ ಗುಣಮುಖರಾಗಿ ಮನೆಗೆ ಮರಳಿದರು. ಕೋಲಾರ ತಾಲ್ಲೂಕಿನ 357 ಮಂದಿ, ಮಾಲೂರು ತಾಲ್ಲೂಕಿನ 115, ಬಂಗಾರಪೇಟೆ ತಾಲ್ಲೂಕಿನ 38, ಕೆಜಿಎಫ್‌ ತಾಲ್ಲೂಕಿನ 48, ಮುಳಬಾಗಿಲು ತಾಲ್ಲೂಕಿನ 73 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 62 ಮಂದಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT