ಭಾನುವಾರ, ಜೂನ್ 26, 2022
29 °C
ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ದೊಡ್ಡ ಪೆಟ್ಟು

ಕೋಲಾರ | ಹಾಲು ಖರೀದಿ ದರ ಕಡಿತ, ಇಂದೇ ಜಾರಿ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌–19 ಸಂಕಷ್ಟದ ಸಂದರ್ಭದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ಹಾಲು ಖರೀದಿ ದರ ಕಡಿತಗೊಳಿಸಿ ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ದೊಡ್ಡ ಪೆಟ್ಟು ಕೊಟ್ಟಿದೆ.

ಒಕ್ಕೂಟವು ಕಳೆದ ಒಂದೂವರೆ ತಿಂಗಳಲ್ಲಿ 2 ಬಾರಿ ಹಾಲು ಖರೀದಿ ದರ ಪರಿಷ್ಕರಿಸಿದೆ. ಜೂನ್‌ನಲ್ಲಿ ಹಾಲು ಖರೀದಿ ದರ ಲೀಟರ್‌ಗೆ ₹ 28 ಇತ್ತು. ಜೂನ್‌ 16ರಂದು ಖರೀದಿ ದರದಲ್ಲಿ ₹ 2 ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಲೀಟರ್‌ಗೆ ₹ 2 ಕಡಿತಗೊಳಿಸಲಾಗಿದ್ದು, ಪರಿಷ್ಕೃತ ದರ ಲೀಟರ್‌ಗೆ ₹ 24 ಆಗಿದೆ. ಹೊಸ ದರ ಶುಕ್ರವಾರ (ಜುಲೈ 24) ಬೆಳಗಿನ ಸರದಿಯಿಂದಲೇ ಜಾರಿಗೆ ಬರಲಿದೆ.

ಹೈನುಗಾರಿಕೆಯು ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಒಕ್ಕೂಟವು ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,870 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, ಸುಮಾರು 2.87 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳಾಗಿದ್ದು, ಕೃಷಿ ನಿರ್ವಹಣೆ ಕಷ್ಟವಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, 2 ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ರೈತರು ಕೃಷಿ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದು, ಹೈನುಗಾರಿಕೆಯು ಬಹುಪಾಲು ರೈತ ಕುಟುಂಬಗಳ ಬೆನ್ನೆಲುಬಾಗಿದೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ.

10.30 ಲಕ್ಷ ಲೀಟರ್‌: ಅವಳಿ ಜಿಲ್ಲೆಗಳಿಂದ ಪ್ರತಿನಿತ್ಯ ಸುಮಾರು 10.30 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ. ದಿನದಿಂದ ದಿನಕ್ಕೆ ಹಾಲು ಸಂಗ್ರಹಣೆ ಪ್ರಮಾಣ ಏರು ಗತಿಯಲ್ಲಿ ಸಾಗಿದೆ. ಆದರೆ, ಕೋವಿಡ್‌–19 ಮತ್ತು ಲಾಕ್‌ಡೌನ್‌ ಕಾರಣಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಒಕ್ಕೂಟದಿಂದ ಬೆಂಗಳೂರಿನ ಮದರ್‌ ಡೇರಿಗೆ ಪ್ರತಿನಿತ್ಯ 17 ಸಾವಿರ ಲೀಟರ್‌, ಆಂಧ್ರಪ್ರದೇಶಕ್ಕೆ 6 ಸಾವಿರ ಲೀಟರ್‌ ಹಾಲು ಕಳುಹಿಸಲಾಗುತ್ತಿದೆ. 3.15 ಲಕ್ಷ ಲೀಟರ್‌ ಸ್ಯಾಚೆಟ್‌ ಹಾಲು, 3.24 ಲಕ್ಷ ಲೀಟರ್‌ ಗುಡ್‌ ಲೈಫ್‌ ಹಾಲು ಮಾರಾಟವಾಗುತ್ತಿದೆ. 35 ಸಾವಿರ ಲೀಟರ್‌ ಹಾಲು ಮೊಸರು ಉತ್ಪಾದನೆಗೆ, 19 ಸಾವಿರ ಲೀಟರ್‌ ಫ್ಲೆಕ್ಸಿ ಫ್ಯಾಕ್‌ಗೆ, ಹಾಲಿನ ಪುಡಿ ತಯಾರಿಕೆಗೆ 1.17 ಲಕ್ಷ ಲೀಟರ್‌ ಹಾಲು ಬಳಸಲಾಗುತ್ತಿದೆ.

ಮತ್ತಷ್ಟು ಸಂಕಷ್ಟ: ಈಗಾಗಲೇ ರೈತರು ಕೊರೊನಾ ಸೋಂಕು, ಲಾಕ್‌ಡೌನ್‌ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಕೋಚಿಮುಲ್‌ ಆಡಳಿತ ಮಂಡಳಿಯು ಹಾಲು ಖರೀದಿ ದರ ತಗ್ಗಿದೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು