ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುವಾದಿ– ಹಿಂದುತ್ವವಾದಿ ಶಕ್ತಿ ಹಿಮ್ಮೆಟ್ಟಿಸಿ

ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವದಲ್ಲಿ ಕೆಪಿಆರ್‌ಎಸ್‌ ಅಧ್ಯಕ್ಷ ಬಯ್ಯಾರೆಡ್ಡಿ ಹೇಳಿಕೆ
Last Updated 17 ಅಕ್ಟೋಬರ್ 2019, 14:50 IST
ಅಕ್ಷರ ಗಾತ್ರ

ಕೋಲಾರ: ‘ಮನುವಾದಿ ಹಾಗೂ ಹಿಂದುತ್ವವಾದಿ ಶಕ್ತಿಗಳು ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿವೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ವಾಗ್ದಾಳಿ ನಡೆಸಿದರು.

ಇಲ್ಲಿ ಗುರುವಾರ ಭಾರತ ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಮಾತನಾಡಿ, ‘ಮನುವಾದಿ ಹಾಗೂ ಹಿಂದುತ್ವವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ದಲಿತ, ಕಾರ್ಮಿಕ, ಮಹಿಳೆ ಸಂಘಟನೆಗಳು ಮತ್ತು ದೇಶಪ್ರೇಮಿಗಳು ಸಂಘಟಿತರಾಗಿ ಕಮ್ಯೂನಿಸ್ಟ್‌ ನಾಯಕತ್ವದಲ್ಲಿ ಹೋರಾಟ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

‘ಕಮ್ಯೂನಿಸ್ಟ್‌ ಪಕ್ಷದ ಸ್ಥಾಪನೆಯು ಐತಿಹಾಸಿಕ ಘಟನೆ. ಪಕ್ಷದ ಇತಿಹಾಸ, ಸಾಧನೆ, ವೈಫಲ್ಯ ಆಧರಿಸಿ ಭವಿಷ್ಯದಲ್ಲಿ ಸಾಗುವ ದಾರಿಯ ಬಗ್ಗೆ ಆತ್ಮಾವಲೋಕನ ನಡೆಸುವ ಅಗತ್ಯವಿದೆ. ಜಿಲ್ಲೆಯ ರಾಜಕೀಯಕ್ಕೆ ಮಹತ್ವದ ಇತಿಹಾಸವಿದೆ. ಕೋಲಾರ ಕಮ್ಯೂನಿಸ್ಟ್‌ ಚಳವಳಿ ಕಟ್ಟಿದ ಜಿಲ್ಲೆಯೂ ಹೌದು. ರೈತ ಚಳವಳಿ, ದಲಿತ ಚಳವಳಿಗೆ ನಾಯಕತ್ವ ನೀಡಿದ ಸ್ಫೂರ್ತಿಯ ಜಿಲ್ಲೆ ಕೋಲಾರ’ ಎಂದು ಬಣ್ಣಿಸಿದರು.

‘ಕಮ್ಯೂನಿಸ್ಟ್‌ ಚಳವಳಿಯು ಎಲ್ಲಾ ಚಳವಳಿಗೆ ತಾಯಿಯಾಗಿ ಕಾರ್ಯ ನಿರ್ವಹಿಸಿದೆ. ವೆಂಕಟಗಿರಿಯಪ್ಪ, ವಾಸನ್, ಜೆ.ಎಸ್.ಮಣಿ, ಬೈರಾರೆಡ್ಡಿ, ಗಂಗಿರೆಡ್ಡಿ, ಮಳ್ಳೂರು ಪಾಪಣ್ಣ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.

‘1920ರ ಅ.17ರಂದು ಸೋವಿಯತ್ ಒಕ್ಕೂಟದ ತಾಷ್ಕೆಂಟ್‌ನಲ್ಲಿ ಕಮ್ಯೂನಿಸ್ಟ್‌ ಪಕ್ಷ ಆರಂಭವಾಯಿತು. ಬ್ರಿಟೀಷರ ಆಳ್ವಿಕೆಯಲ್ಲಿದ್ದ ಕಾಲಘಟ್ಟದಲ್ಲಿ ಂಧನದ ಸಾಧ್ಯತೆಯಿಂದಾಗಿ ದೇಶದ ಕಮ್ಯೂನಿಸ್ಟ್‌ ಮುಖಂಡರು ಅಲ್ಲಿ ಚಳವಳಿ ಆರಂಭಿಸಿದ್ದರು. ಈ ನೂರು ವರ್ಷದ ಆಚರಣೆಗೆ ಕೇಂದ್ರ ಸಮಿತಿಯ ನಿರ್ಧಾರದಂತೆ ವರ್ಷವಿಡೀ ಕಾರ್ಯಕ್ರಮ ರೂಪಿಸಲಾಗುವುದು’ ಎಂದರು.

ದೇಶಕ್ಕೆ ಆಪತ್ತು: ‘ವೀರ ಸಾವರ್ಕರ್‌ ದೇಶಪ್ರೇಮಿ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದರೆಂದು ಹೇಳಲಾಗುತ್ತಿದೆ. ಆದರೆ, 1911ರಲ್ಲಿ ಬ್ರಿಟೀಷರು ಅಂಡಮಾನ್‌ ಜೈಲಿನಲ್ಲಿ ಬಂಧಿಸಿ ಇಟ್ಟಿದ್ದಾಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುವುದಿಲ್ಲ ಎಂದು ಪತ್ರ ಬರೆದು ಹೊರಬಂದ ಸಾವರ್ಕರ್‌ಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಲು ಮುಂದಾಗಿದೆ. ಸಂಘ ಪರಿವಾರದವರು ಹಾಗೂ ಪ್ರಧಾನಿ ಮೋದಿ ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.

‘ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿ ತಿಳಿಯದ, ಬ್ರಿಟೀಷರ ಏಜೆಂಟರಂತೆ ವರ್ತಿಸಿದ, ಗಾಂಧೀಜಿಯನ್ನು ಹತ್ಯೆಗೈದ ವಂಶಸ್ಥರು ಈಗ ದೇಶಭಕ್ತಿ ಹಾಗೂ ಅಖಂಡ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ಭಾರತ ಹಿಂದೂ ರಾಷ್ಟ್ರವೆಂದು ಪ್ರತಿಪಾದಿಸುವ ಮತ್ತು ರಾಮಮಂದಿರ ನಿರ್ಮಾಣದ ಗುರಿ ಹೊಂದಿದ್ದಾರೆ. ಇಂತಹ ಧರ್ಮಾಂಧ ಶಕ್ತಿಗಳನ್ನು ಹಿಮ್ಮೆಟ್ಟಿಸದಿದ್ದರೆ ದೇಶಕ್ಕೆ ದೊಡ್ಡ ಆಪತ್ತು ಕಾದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ದಿಟ್ಟ ಉತ್ತರ: ‘1921ರಲ್ಲಿ ನಡೆದ ಕಾಂಗ್ರೆಸ್‌ನ ಎಐಸಿಸಿ ಅಧಿವೇಶನದಲ್ಲಿ ದೇಶದ ಸ್ವಾತಂತ್ರ್ಯದ ವಿಚಾರವನ್ನು ಕಮ್ಯೂನಿಸ್ಟರ್‌ ಪ್ರಸ್ತಾಪಿಸಿದಾಗ ಗಾಂಧೀಜಿ ಸಮ್ಮತಿಸಿರಲಿಲ್ಲ. 1922ರಲ್ಲೂ ಚರ್ಚೆಯಾಗಿ ಸಂಪೂರ್ಣ ಸ್ವಾತಂತ್ರ್ಯ ಬೇಕೆಂಬ ಕಮ್ಯೂನಿಸ್ಟ್‌ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸಭೆಯು ನಿರ್ಣಯ ಅಂಗೀಕರಿಸಿತು. ಹೀಗೆ ಕಮ್ಯೂನಿಸ್ಟ್‌ ಚಳವಳಿಯಿಂದಲೇ ಮೊದಲಿಗೆ ಸ್ವಾತಂತ್ರ್ಯ ಸಂಗ್ರಾಮದ ಕೂಗು ಕೇಳಿಬಂದಿತು’ ಎಂದು ಅಭಿಪ್ರಾಯಪಟ್ಟರು.

‘ಲೋಹಿಯಾವಾದಿಗಳು ಹಾಗೂ ಅಂಬೇಡ್ಕರ್‌ ವಾದಿಗಳು ಆತ್ಮವಿಮರ್ಶೆ ಮಾಡಿಕೊಂಡು ಕಮ್ಯೂನಿಸ್ಟ್‌ ಸಂಘಟನೆಗಳ ಜತೆ ಕೈಜೋಡಿಸಿ ಪಟ್ಟಾಭದ್ರ ಹಿತಾಸಕ್ತಿಗಳಿಗೆ ದಿಟ್ಟ ಉತ್ತರ ನೀಡಬೇಕು’ ಎಂದು ಹೇಳಿದರು.

ದಿಕ್ಕು ತಪ್ಪಿಸುತ್ತಿದ್ದಾರೆ: ‘ದೇಶದಲ್ಲಿ ಈಗ ವಾಸ್ತವ ಇತಿಹಾಸ ಮರೆಮಾಚಿ ಜನರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿಯು ಸಾವರ್ಕರ್‌ ದೇಶಪ್ರೇಮಿ ಎಂದು ಹೇಳಿ ಭಾರತ ರತ್ನಕ್ಕೆ ಶಿಫಾರಸು ಮಾಡಿದ್ದಾರೆ’ ಎಂದು ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ್ ಕಿಡಿಕಾರಿದರು.

‘ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯವು ತೀವ್ರ ಬರಕ್ಕೆ ತುತ್ತಾದ ಜಿಲ್ಲೆಯಾಗಿದ್ದು, ಅಲ್ಲಿನ ಶೇ 6ರಷ್ಟು ಜನರಿಗೆ ಕುಡಿಯಲು ನೀರಿಲ್ಲ. ಆ ಭಾಗದಲ್ಲೇ ಗೆದ್ದು ಕೇಂದ್ರ ಸಚಿವರಾಗಿರುವ ನಿತಿನ್‌ ಗಡ್ಕರಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಮಹಾತ್ಮ ಗಾಂಧೀಜಿಯನ್ನು ಕೊಂದ ವಂಶಸ್ಥರು ಗಾಂಧಿಯ 150ನೇ ಜನ್ಮ ದಿನಾಚರಣೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ, ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಕೆಪಿಆರ್‍ಎಸ್ ಜಿಲ್ಲಾ ಘಟಕದ ಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT