7
ಪತ್ರಿಕಾ ದಿನಾಚರಣೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಸಲಹೆ

ಆತ್ಮಸಾಕ್ಷಿಗನುಗುಣವಾಗಿ ವರದಿ ಮಾಡಿ

Published:
Updated:
ಕೋಲಾರದಲ್ಲಿ ಭಾನುವಾರ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.

ಕೋಲಾರ: ‘ಪತ್ರಕರ್ತರು ಆತ್ಮಸಾಕ್ಷಿಗನುಗುಣವಾಗಿ ವರದಿ ಮಾಡಿ ವೃತ್ತಿ ಘನತೆ ಎತ್ತಿಹಿಡಿಯಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಯಾರೋ ಹೇಳ್ತಾರೆ ಎಂದು ವರದಿ ಮಾಡಿದರೆ ಒಳ್ಳೆಯ ಬೆಳವಣಿಗೆಯಲ್ಲ. ವಾಸ್ತವ ಸತ್ಯ ಅರಿತು ಸುದ್ದಿ ಮಾಡಿದಾಗ ನಿಮ್ಮ ಮತ್ತು ಪತ್ರಿಕೆಯ ಘನತೆ ಹೆಚ್ಚುತ್ತದೆ’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಪತ್ರಿಕಾರಂಗಕ್ಕೆ ಬಂದಿದ್ದಾರೆ. ಅವರಿಗೆ ಹಿರಿಯ ಪತ್ರಕರ್ತರು ಮಾರ್ಗದರ್ಶನ ನೀಡಬೇಕು. ಇಡೀ ಸಮಾಜ ನಿಮ್ಮ ವರದಿಯನ್ನು ಗಮನಿಸುತ್ತದೆ. ನೀವು ಆಡಳಿತ ಸುಗಮ ಹಾದಿಯಲ್ಲಿ ಸಾಗಲು ಕಣ್ಣಿಟ್ಟಿರಬೇಕು’ ಎಂದು ಹೇಳಿದರು.

‘ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪತ್ರಕರ್ತರಿಗೆ ನೀಡಿರುವ ಸೌಕರ್ಯಗಳು ಕುರಿತು ರಾಜ್ಯದಲ್ಲಿ ಜಾರಿ ಮಾಡಲು ಪತ್ರಕರ್ತರ ಸಂಘದ ಪದಾಧಿಕಾರಿಗಳು ಸದನ ನಡೆಯುವ ಸಂದರ್ಭದಲ್ಲಿ ಬೆಂಗಳೂರಿಗೆ ಬಂದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಪತ್ರಿಕಾ ರಂಗದಲ್ಲಿ ಪ್ರಾಮಾಣಿಕ ದುಡಿಮೆಗೆ ಭವಿಷ್ಯ ಇದೆ. ಪತ್ರಿಕೆಗಳನ್ನು ಯಾರು ಜೀವನ ನಡೆಸಲು ನಡೆಸುತ್ತಿಲ್ಲ. ಸಮಾಜದ ವ್ಯವಸ್ಥೆ ಸರಿಪಡಿಸಲು, ಆಡಳಿತ ನಡೆಸುವವರ ಲೋಪಗಳನ್ನು ಜನರಿಗೆ ತಿಳಿಸಲು’ ಎಂದು ಅಭಿಪ್ರಾಯಪಟ್ಟರು.

‘ಸರಿ ದಾರಿಯಲ್ಲಿ ಆಡಳಿತ ಸಾಗಲು ಪತ್ರಿಕಾರಂಗ ಅಗತ್ಯ. ಸಮಾಜದಲ್ಲಿನ ಸಮಸ್ಯೆಗಳನ್ನು ಸರಿಪಡಿಸುವ ಶಕ್ತಿ ಪತ್ರಕರ್ತರಿಗೆ ಇದ್ದು, ಈ ಅವಕಾಶವನ್ನು ಸರಿಯಾದ ರೀತಿ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸಲಹೆ ನೀಡಿದರು. ‘ಪತ್ರಕರ್ತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಳೊಂದಿಗೆ ಚರ್ಚಿಸಲು ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಬರುತ್ತೆವೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಜ್ ಸಫೆಟ್ ಮಾತನಾಡಿ, ‘ಪತ್ರಿಕೆಗಳು ಸಮಾಜದ ಕನ್ನಡಿಯಿದ್ದಂತೆ. ಜನರ ಸಮಸ್ಯೆಗಳನ್ನು ಅಲ್ಲಿ ಬಿಂಬಿಸಿದಾಗ ಅವು ಆಡಳಿತ ನಡೆಸುವವರ ಮನಮುಟ್ಟುತ್ತವೆ’ ಎಂದರು. ‘ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಮಹತ್ವವಾದದು. ರಾಷ್ಟ್ರೀಯ ಸಮಸ್ಯೆಗಳು, ಮಹಿಳೆಯರ ಸಮಸ್ಯೆಗಳ ಕುರಿತು ಸುದ್ದಿ ಪ್ರಚಾರ ಮಾಡುವಾಗ ಸಾಮಾಜಿಕ ಕಳಕಳಿ ಅಗತ್ಯ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು. ಶಾಸಕಿ ರೂಪಕಲಾ, ವಾರ್ತಾಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !