ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಹಿತಕ್ಕೆ ಜನಪ್ರತಿನಿಧಿಗಳು ಒಗ್ಗೂಡಬೇಕು

Last Updated 18 ಆಗಸ್ಟ್ 2019, 20:04 IST
ಅಕ್ಷರ ಗಾತ್ರ

ಕೋಲಾರ: ‘ನಾನು ಈಗಲೂ ಸ್ಪೀಕರ್. ಜನಪ್ರತಿನಿಧಿ ಯಾವುದೇ ಸ್ಥಾನದಲ್ಲಿದ್ದರೂ ಜನರಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕು. ಜನರ ಹಿತ ಬಂದಾಗ ನಾವೆಲ್ಲಾ ಒಂದಾಗಬೇಕು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಸೂಕ್ಷ್ಮವಾಗಿ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆ.ಸಿ ವ್ಯಾಲಿ ಯೋಜನೆಯ ನೀರಿನ ಒಳ ಹರಿವು ಕಡಿಮೆಯಾಗಿಲ್ಲ. ಆದರೆ, ಕೆಲ ಸ್ವಾರ್ಥಿಗಳು ಮೋಟರ್‌ ಅಳವಡಿಸಿ ನೀರನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರು ಬದಲಾಗದಿದ್ದರೆ ಶಿಸ್ತುಕ್ರಮ ಜೈಲಿನಲ್ಲಿ ಇಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ರಾಜ್ಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರಂತಹ ನತದೃಷ್ಟರು ಯಾರೂ ಇಲ್ಲ. ಉತ್ತರ ಕರ್ನಾಟಕದಲ್ಲಿ ಪ್ರವಾಹವು ಜನರ ಬದುಕನ್ನೇ ಕೊಚ್ಚಿಕೊಂಡು ಹೋಗಿದೆ. ಆದರೆ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಜನರ ಬದುಕು ನಾಶದ ಅಂಚಿನಲ್ಲಿರುವ ಸಮಯದಲ್ಲಿ ನಾನು ರಾಜಕೀಯ ಮಾಡಿಕೊಂಡಿರಲು ಸಾಧ್ಯವಿಲ್ಲ. ನಮ್ಮನ್ನು ಕೆಣಕಬೇಡಿ’ ಎಂದು ಮನವಿ ಮಾಡಿದರು.

‘ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಅಂಕಿತ ಆಗಿದ್ದಾರೆ. ಆ ಯೋಜನೆಯಿಂದ ಶತಾಯಗತಾಯ 2020ಕ್ಕೆ ಜಿಲ್ಲೆಗೆ ನೀರು ತರಲು ಸರ್ವ ಪ್ರಯತ್ನ ನಡೆಸುತ್ತಿದ್ದೇವೆ’ ಎಂದು ವಿವರಿಸಿದರು.

ಕೋಚ್‌ ಕಾರ್ಖಾನೆ ನಿಶ್ಚಿತ: ‘ರೈಲ್ವೆ ಕೋಚ್‌ ಕಾರ್ಖಾನೆ ಯೋಜನೆ ಕೈಬಿಟ್ಟಿಲ್ಲ. ಜನ ಊಹಾಪೋಹಕ್ಕೆ ಕಿವಿಗೊಡಬಾರದು. ಕೇಂದ್ರ ಸರ್ಕಾರ ಯಾವುದೇ ಯೋಜನೆ ಜಾರಿಗೊಳಿಸುವ ಮುನ್ನ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಶಂಕುಸ್ಥಾಪನೆ ಮಾಡುತ್ತದೆ. ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ತಡವಾಗಿದೆಯೇ ಹೊರತು ಬೇರೆ ಏನೂ ಇಲ್ಲ. ಸ್ವಲ್ಪ ಹೆಚ್ಚಿಗೆ ಹಣ ಬರುತ್ತದೆ ಎಂಬ ಆಸೆಯಿಂದ ಕೆಲವರು ಇಲ್ಲಸಲ್ಲದ ಅರ್ಜಿ ಹಾಕಿದ್ದಾರೆ. ಯೋಜನೆ ಜಾರಿ ಆಗುವುದು ನಿಶ್ಚಿತ’ ಎಂದು ಭರವಸೆ ನೀಡಿದರು.

‘ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪನೆ ಆಗುವುದಿಲ್ಲ ಎಂದು ನಾನು ಹೇಳಿಲ್ಲ. ಕೋಚ್ ಕಾರ್ಖಾನೆ ಬದಲಿಗೆ ವರ್ಕ್‌ಶಾಪ್‌ ಆರಂಭಿಸುವ ಬಗ್ಗೆ ಮಾತನಾಡಿದ್ದೇನೆ ಅಷ್ಟೇ’ ಎಂದು ಸಂಸದ ಎಸ್‌.ಮುನಿಸ್ವಾಮಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT