ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿ ಸಂತೆಗೆ ಸೌಕರ್ಯ ಕಲ್ಪಿಸಲು ಆಗ್ರಹ

ಕರ್ನಾಟಕ ಪ್ರಾಂತ ರೈತ ಸಂಘದ ಪ್ರತಿಭಟನೆ
Last Updated 23 ಜೂನ್ 2022, 4:18 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ರೋಜೇನಹಳ್ಳಿ ಅಂತರ ರಾಜ್ಯ ಕುರಿ ಸಂತೆಯಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಸಂತೆಯಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಮಾತನಾಡಿ, ಸಂತೆಯಲ್ಲಿ ಟೆಂಡರ್ ಕರಾರಿಗಿಂತ ಮೂರುಪಟ್ಟು ಹೆಚ್ಚು ಕರ ವಸೂಲಿ ಮಾಡಲಾಗುತ್ತಿದೆ. ಪ್ರತಿ ವಾರದ ಸಂತೆಯಲ್ಲಿ ₹ 50 ಸಾವಿರದಿಂದ ₹ 60 ಸಾವಿರ ಕರ ಸಂಗ್ರಹವಾಗುತ್ತದೆ. ಒಂದು ವರ್ಷಕ್ಕೆ ₹ 24 ಲಕ್ಷದಿಂದ 25 ಲಕ್ಷ ಕರ ಸಂಗ್ರಹವಾಗುತ್ತಿದೆ. ಪ್ರತಿ ಸಂತೆಯಲ್ಲಿ ₹ 2.5 ಕೋಟಿಯಿಂದ ₹ 3 ಕೋಟಿ ವಹಿವಾಟು ನಡೆಯುತ್ತದೆ. ಆದರೆ, ಸಂತೆ ಮೂಲ ಸೌಕರ್ಯದಿಂದ ವಂಚಿತವಾಗಿದೆ ಎಂದು
ದೂರಿದರು.

ಸಂತೆಯಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಆದರೆ, ಕುಡಿಯುವ ನೀರಿನ ಸೌಲಭ್ಯ ಇಲ್ಲ. ಶೌಚಾಲಯ ವ್ಯವಸ್ಥೆ ಇಲ್ಲ. ಮಳೆ ನೀರು ಸಂತೆ ಮೈದಾನದಿಂದ ಹೊರಗೆ ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಮೋರಿ ಇಲ್ಲ. ಟೆಂಪೊ ನಿಲ್ಲಿಸಲು ನಿಗದಿತ ಸ್ಥಳವಿಲ್ಲ ಎಂದು ಆರೋಪಿಸಿದರು.

ದಾನಿಗಳು ಸಂತೆಗೆ 15 ಎಕರೆ ಜಮೀನು ದಾನ ನೀಡಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಆ ಪೈಕಿ 5 ಎಕರೆ ಜಮೀನನ್ನು ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಟೀಕಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂತೆಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು. ಆ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾತಕೋಟ ನವೀನ್ ಕುಮಾರ್, ನುಕ್ಕನಹಳ್ಳಿ ಶ್ರೀರಾಮ್, ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಆರ್. ವೆಂಕಟೇಶ್, ಸಹ ಕಾರ್ಯದರ್ಶಿಗಳಾದ ಫಾರೂಕ್, ಗಂಗಟ್ಟ ಯಲ್ಲಪ್ಪ, ಮುಖಂಡರಾದ ವಳಗೇರನಹಳ್ಳಿ ಮಂಜುಳಾ, ಶ್ಯಾಗತ್ತೂರು ನಾಗರಾಜ್, ಸೋಮಸಂದ್ರ ಮುನಿವೆಂಕಟಸ್ವಾಮಿ, ಬಾಲರಾಜ್, ಕಂಬಾಲಪಲ್ಲಿ ರಾಮಪ್ಪ, ಆವಲುಕುಪ್ಪ ಶಿವರಾಜ್, ವೆಲಗಲಬುರ್ರೆ ಮುನಿರಾಜು, ಕುರಿ ವ್ಯಾಪಾರಿಗಳಾದ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಆಂಜಪ್ಪ, ಗಂಗಾಪುರ ನರಸಿಂಹಪ್ಪ, ಸತ್ಯಣ್ಣ, ನಾಗೇಶ್, ನಂದೀಶ್, ಮೋಹನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT