ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ವೇತನ ಬಡ್ತಿ ನೀಡಲು ಮನವಿ; ಸದಸ್ಯ ವೆಂಕಟನಾರಾಯಣ್ ಭರವಸೆ

ಭಾರತ ಸೇವಾದಳ ರಾಜ್ಯ ಕಾರ್ಯಕಾರಿ ಸದಸ್ಯ ವೆಂಕಟನಾರಾಯಣ್ ಭರವಸೆ
Last Updated 26 ಆಗಸ್ಟ್ 2021, 15:10 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರೀಯತೆ ಮತ್ತು ಶಿಸ್ತು ಕಲಿಸುವ ಭಾರತ ಸೇವಾದಳ ಚಟುವಟಿಕೆಗಳಲ್ಲಿ ಭಾಗಿಯಾಗುವ ಶಿಕ್ಷಕರಿಗೆ ವೇತನ ಬಡ್ತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ’ ಎಂದು ಭಾರತ ಸೇವಾದಳ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ಕೆ.ವೆಂಕಟನಾರಾಯಣ್ ಭರವಸೆ ನೀಡಿದರು.

ಭಾರತ ಸೇವಾದಳ ವತಿಯಿಂದ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹರ್ಡೀಕರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಭಾರತ ಸೇವಾದಳ ಚಟುವಟಿಕೆ ವೃದ್ಧಿಸಲು ಮುಂದಿನ ಬಜೆಟ್‌ಗೂ ಮುನ್ನ ಸರ್ಕಾರದಿಂದ ಅಗತ್ಯ ನೆರವು ಕೋರುತ್ತೇವೆ’ ಎಂದು ತಿಳಿಸಿದರು.

‘ನಿಸ್ವಾರ್ಥ ಸೇವೆಯ ಹರ್ಡೀಕರ್‌ರ ದಾರಿಯನ್ನು ಮಕ್ಕಳಿಗೆ ತೋರೋಣ. ಮಕ್ಕಳಿಗೆ ಶಿಕ್ಷಕರ ಮೂಲಕ ಸೇವಾದಳದ ಧ್ಯೇಯೋದ್ದೇಶಗಳನ್ನು ತಲುಪಿಸಬೇಕು. ನಗರಸಭಾ ಸದಸ್ಯ ಮುಬಾರಕ್‌ ಅವರ ನೆರವಿನಿಂದ ಭಾರತ ಸೇವಾದಳ ಘಟಕಕ್ಕೆ ಅಗತ್ಯ ನಿವೇಶನ ಪಡೆದುಕೊಳ್ಳಿ. ಜಿಲ್ಲೆಯಲ್ಲಿ ಸೇವಾದಳ ಭವನ ನಿರ್ಮಿಸಲು ₹ 25 ಲಕ್ಷ ಅನುದಾನ ಮೀಸಲಿದೆ. ಜನಪ್ರತಿನಿಧಿಗಳ ಸಹಕಾರ ಪಡೆದು ಭವನ ನಿರ್ಮಿಸೋಣ’ ಎಂದರು.

‘ಪ್ರತಿ ಶಾಲೆಯಲ್ಲೂ ಸೇವಾದಳ ಘಟಕ ಆರಂಭಿಸಬೇಕು. ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಿ ಸಮಾಜಕ್ಕೆ ಭ್ರಾತೃತ್ವದ ಸಂದೇಶ ರವಾನಿಸಿ. ದೇಶದ ಸ್ವಾತಂತ್ರ್ಯಕ್ಕಾಗಿ ಸಂಘಟಿತವಾದ ಈ ಸಂಸ್ಥೆ ನಿರಂತರವಾಗಿ ಮಕ್ಕಳಲ್ಲಿ ಸಂಸ್ಕಾರ ತುಂಬಿ ಉತ್ತಮ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು.

‘ಸ್ವಾರ್ಥ ಬಿಟ್ಟು ಮಕ್ಕಳಲ್ಲಿ ಶಿಸ್ತು, ಸಂಯಮ, ದೇಶ ಪ್ರೇಮ ಮೂಡಿಸುವ ಸಂಘಟನೆಗಳನ್ನು ಜನರ ಹತ್ತಿರಕ್ಕೆ ಕೊಂಡೊಯ್ಯಬೇಕು. ಸುಭದ್ರ ಭಾರತ ನಿರ್ಮಾಣಕ್ಕಾಗಿ ಮಕ್ಕಳನ್ನು ಭಾರತ ಸೇವಾದಳದ ಅಡಿಯಲ್ಲಿ ಮುನ್ನಡೆಸುವ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಮನವಿ ಮಾಡಿದರು.

ಶಿಬಿರ ಆರಂಭಿಸಿ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಆಪ್ತರಾಗಿರುವ ವೆಂಕಟನಾರಾಯಣ್ ಅವರು ಮನಸ್ಸು ಮಾಡಿದರೆ ಸೇವಾದಳಕ್ಕೆ ಹೊಸ ಹುರುಪು ತರಬಹುದು. ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡಿರುವ ಶಿಕ್ಷಕರ, ವಿದ್ಯಾರ್ಥಿಗಳ ಶಿಬಿರಗಳನ್ನು ಮತ್ತೆ ಆರಂಭಿಸಬಹುದು’ ಎಂದು ನಗರಸಭೆ ಸದಸ್ಯ ಬಿ.ಎಂ.ಮುಬಾರಕ್‌ ಸಲಹೆ ನೀಡಿದರು.

ರೆಡ್‌ಕ್ರಾಸ್‌ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣೇಗೌಡ, ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕಿ ಅರುಣಮ್ಮ, ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಸಂಘಟಕ ದಾನೇಶ್, ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್, ರೆಡ್‌ಕ್ರಾಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಆರ್.ಶ್ರೀನಿವಾಸನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT