ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಸಮಸ್ಯೆ ಪರಿಹಾರಕ್ಕೆ ಮನವಿ

ಜಿಲ್ಲಾಧಿಕಾರಿ ಮಂಜುನಾಥ್‌ ಬಳಿ ಅಳಲು ತೋಡಿಕೊಂಡ ನಗರವಾಸಿಗಳು
Last Updated 13 ಮಾರ್ಚ್ 2019, 15:29 IST
ಅಕ್ಷರ ಗಾತ್ರ

ಕೋಲಾರ: ನಗರದ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಒತ್ತಾಯಿಸಿ ವಿವಿಧ ವಾರ್ಡ್‌ಗಳ ನಿವಾಸಿಗಳು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರಿಗೆ ಇಲ್ಲಿ ಬುಧವಾರ ಮನವಿ ಸಲ್ಲಿಸಿದರು.

‘ಬೇಸಿಗೆ ಕಾಲ ಆರಂಭವಾದ ಬೆನ್ನಲ್ಲೇ ನಗರದ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಬಡಾವಣೆಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಮತ್ತೊಂದೆಡೆ ನಗರಸಭೆಯ ಟ್ಯಾಂಕರ್ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ’ ಎಂದು ನಗರವಾಸಿಗಳು ಅಳಲು ತೋಡಿಕೊಂಡರು.

‘ಕಠಾರಿಪಾಳ್ಯ, ಬಲಜಿಗರ ಬೀದಿ ಹಾಗೂ ಗಾಂಧಿನಗರ ಬಡಾವಣೆಯಲ್ಲಿ ನೀರಿನ ಸಮಸ್ಯೆಯಿದೆ. ಮನೆಗಳ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ದೂರು ನೀಡಲು ನಗರಸಭೆ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ’ ಎಂದು ಕಠಾರಿಪಾಳ್ಯ ನಿವಾಸಿ ಲಕ್ಷ್ಮಮ್ಮ ದೂರಿದರು.

‘ಕೆಲ ಬಡಾವಣೆಯ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ಪಂಪ್‌ ಮೋಟರ್‌ ಕೆಟ್ಟಿರುವುದರಿಂದ ನೀರು ಪೂರೈಕೆಯಾಗುತ್ತಿಲ್ಲ. ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಪಂಪ್‌, ಮೋಟರ್‌ ಅಳವಡಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಜನರ ಸಮಸ್ಯೆಯ ಅರಿವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರು ಖರೀದಿ: ‘ನಗರಸಭೆಯಿಂದ ಹೊಸ ಟ್ಯಾಂಕರ್‌ಗಳನ್ನು ಖರೀದಿಸಿದ್ದರೂ ಬಡಾವಣೆಗೆ ನೀರು ಕೊಡುತ್ತಿಲ್ಲ. ಟ್ಯಾಂಕರ್‌ಗಳಿಗೆ ಡೀಸೆಲ್‌ ಹಾಕಿಸದ ಕಾರಣ ನೀರು ಪೂರೈಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆ ತಾರಕಕ್ಕೇರಿದೆ. ಹಣ ಕೊಟ್ಟು ಖಾಸಗಿ ಟ್ಯಾಂಕರ್‌ ಮಾಲೀಕರಿಂದ ನೀರು ಖರೀದಿಸುವ ಪರಿಸ್ಥಿತಿ ಎದುರಾಗಿದೆ’ ಎಂದು ಸೌಂದರ್ಯ ಹೇಳಿದರು.

‘ಬಡಾವಣೆಯ ವಾಟರ್‌ ಮನ್‌ಗಳು ಹಣ ಕೊಡುವವರ ಮನೆಗಳಿಗೆ ಮಾತ್ರ ನೀರು ಬಿಡುತ್ತಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ನಗರಸಭೆ ಸಹಾಯವಾಣಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸೌಜನ್ಯಕ್ಕೂ ಬಡಾವಣೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಹೊಸದಾಗಿ ಪಂಪ್‌, ಮೋಟರ್‌ ಅಳವಡಿಸಬೇಕು. ದುರಸ್ತಿ ಹಂತದಲ್ಲಿರುವ ಕೊಳವೆ ಬಾವಿಗಳನ್ನು ಶೀಘ್ರವೇ ರಿಪೇರಿ ಮಾಡಬೇಕು. ಹಿಂದಿನಂತೆಯೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು’ ಎಂದು ಕೋರಿದರು.

ಶೀಘ್ರವೇ ಪರಿಹರಿಸಿ: ನಗರವಾಸಿಗಳ ಅಹವಾಲು ಆಲಿಸಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಕಚೇರಿಗೆ ಕರೆಸಿ, ‘ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ಗೆ ಭೇಟಿ ನೀಡಿ ನೀರಿನ ಸಮಸ್ಯೆ ಶೀಘ್ರವೇ ಪರಿಹರಿಸಿ’ ಎಂದು ಸೂಚಿಸಿದರು.

ವಿವಿಧ ಬಡಾವಣೆ ನಿವಾಸಿಗಳಾದ ಶಶಿಕಲಾ, ಕೃಷ್ಣವೇಣಿ, ರಾಧಮ್ಮ, ಗಾಯಿತ್ರಿ, ಮಂಜುಳಾ, ಶ್ರೀದೇವಿ, ಸುರೇಶ್‌ಬಾಬು, ಚಲಪತಿ, ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT