ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ನಿವಾರಣೆಗೆ ಒತ್ತಾಯಿಸಿ ಧರಣಿ

ಸರ್ಕಾರಕ್ಕೆ ಉಪನ್ಯಾಸಕರ ಬಗ್ಗೆ ಕಾಳಜಿಯಿಲ್ಲ: ಆಕ್ರೋಶ
Last Updated 29 ನವೆಂಬರ್ 2019, 14:10 IST
ಅಕ್ಷರ ಗಾತ್ರ

ಕೋಲಾರ: ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು.

‘ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸರ್ಕಾರಕ್ಕೆ ಉಪನ್ಯಾಸಕರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ವೇತನ ಆಯೋಗದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ಸರಿಪಡಿಸುವುದಾಗಿ ಹಿಂದಿನ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಭರವಸೆ ನೀಡಿದ್ದರು. ಆದರೆ, ಆ ಭರವಸೆ ಹುಸಿಯಾಗಿದೆ. ಉಪನ್ಯಾಸಕರಿಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆ.ನಟರಾಜ್ ಹೇಳಿದರು.

‘ವೇತನ ತಾರತಮ್ಯ ನಿವಾರಣೆಗೆ 2 ದಶಕದಿಂದ ಹೋರಾಟ ಮಾಡುತ್ತಿದ್ದೇವೆ. ವೇತನ ತಾರತಮ್ಯ ಸೇರಿದಂತೆ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಪರಿಶೀಲಿಸಲು 2011ರಲ್ಲಿ ಕುಮಾರನಾಯಕ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ ಹಲವು ವರ್ಷಗಳಾದರೂ ಸಮಿತಿಯ ಶಿಫಾರಸ್ಸು ಅನುಷ್ಠಾನಗೊಂಡಿಲ್ಲ’ ಎಂದುದೂರಿದರು.

ವೇತನ ಕಡಿಮೆ: ‘ಉಪನ್ಯಾಸಕರಿಗೆ ನೀಡುತ್ತಿರುವ ವೇತನ ಪ್ರಮಾಣ ತುಂಬಾ ಕಡಿಮೆಯಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ವೇತನವು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಉಪನ್ಯಾಸಕರಿಗೆ ಹೆಚ್ಚಿನ ವೇತನ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಉಪನ್ಯಾಸಕರನ್ನು ನಿರ್ಲಕ್ಷಿಸಲಾಗಿದೆ’ ಎಂದು ಧರಣಿನಿರತರು ಕಿಡಿಕಾರಿದರು.

‘2ನೇ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಬೇಕು. ಉಪನ್ಯಾಸಕರ ಕಾರ್ಯಭಾರ ನಿಗದಿಗೆ ಉನ್ನತ ಸಮಿತಿ ರಚಿಸಬೇಕು. ಆವರೆಗೆ ಉಪನ್ಯಾಸಕರಿಗೆ ವಾರದಲ್ಲಿ 12 ಗಂಟೆ ಬೋಧನಾ ಅವಧಿ ನಿಗದಿಪಡಿಸಬೇಕು. ಎನ್‌ಸಿಆರ್‌ಟಿ ನಿಯಮಾವಳಿಯಂತೆ ಕಾಲೇಜುಗಳಲ್ಲಿ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 40ಕ್ಕೆ ನಿಗದಿಪಡಿಸಬೇಕು ವೇತನ ಬಡ್ತಿ ಮಂಜೂರು ಮಾಡಬೇಕು. ಮೌಲ್ಯಮಾಪನ ಸಂಭಾವನೆಯನ್ನು ಶೇ 30ರಷ್ಟು ಹೆಚ್ಚಿಸಿ ಚೆಕ್ ಮೂಲಕ ವಿತರಿಸಬೇಕು’ ಎಂದು ಒತ್ತಾಯಿಸಿದರು.

ಮೌಲ್ಯಮಾಪನ ಬಹಿಷ್ಕಾರ: ‘ಎನ್‌ಇಟಿ, ಸ್ಲೆಟ್‌, ಎಂಫಿಲ್‌, ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಬಡ್ತಿ ನೀಡಬೇಕು. ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಬೇಕು. ಕಾಲಮಿತಿಯೊಳಗೆ ಬೇಡಿಕೆ ಈಡೇರಿಸದಿದ್ದರೆ 2019–20ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಂ.ಉದಯ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ ಎನ್.ಬೋಡಿರೆಡ್ಡಿ, ಕೋಶಾಧ್ಯಕ್ಷ ಟಿ.ಚಂದ್ರಪ್ಪ, ಉಪನ್ಯಾಸಕರಾದ ನಾಗಾನಂದ ಕೆಂಪರಾಜ್, ಮರಿಸ್ವಾಮಿ, ಅನುರಾಧಾ, ಜಿ.ಎಂ.ಗೋಪಿಕೃಷ್ಣನ್, ಎನ್.ಮಂಜುನಾಥರೆಡ್ಡಿ, ಜಿ.ಎಲ್.ನಾಗರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT