ಬುಧವಾರ, ಮೇ 18, 2022
27 °C

ಮೀಸಲಾತಿ: ಉಗ್ರ ಹೋರಾಟದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ಪ್ರಸನ್ನಾನಂದಸ್ವಾಮೀಜಿ 82 ದಿನದಿಂದ ಹೋರಾಟ ನಡೆಸುತ್ತಿದ್ದಾರೆ. ಶೀಘ್ರವೇ ಈ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಅಖಿಲ ಕರ್ನಾಟಕ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸಂಚಾಲಕ ಬಿ.ವಿ.ಬಸವರಾಜ್‌ ನಾಯಕ್ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸ್ವಾಮೀಜಿಯು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಬೇಡಿಕೆ ನಿರ್ಲಕ್ಷಿಸಿರುವುದು ಖಂಡನೀಯ. ಹೋರಾಟ ಮೇ 20ಕ್ಕೆ 100 ದಿನ ಪೂರೈಸಲಿದ್ದು, ಅಂದು ಬಸ್ ಮತ್ತು ರೈಲು ತಡೆ ಸೇರಿದಂತೆ ಉಗ್ರ ಹೋರಾಟಕ್ಕೆ ಸಜ್ಜಾಗಿದ್ದೇವೆ. ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ಹೊಣೆ’ ಎಂದು ಗುಡುಗಿದರು.

‘ಸುಪ್ರೀಂ ಕೋರ್ಟ್‌ ಜನಗಣತಿ ವರದಿ ಪ್ರಕಾರ ಪರಿಷ್ಕೃತ ಮೀಸಲಾತಿ ಜಾರಿ ಮಾಡಲು ರಾಜ್ಯ ಹೈಕೋರ್ಟ್ ಮೂಲಕ ಆದೇಶಿಸಿದ್ದರೂ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸ್ವಾಮೀಜಿಯವರ ಹೋರಾಟದ ಸ್ಥಳಕ್ಕೆ ಬಂದಿದ್ದ ಶಾಸಕರ ನಿಯೋಗವು 15 ದಿನದಲ್ಲಿ ಬೇಡಿಕೆ ಈಡೇರಿಸುವುದಾಗಿ ಹೇಳಿ ತಿಂಗಳೇ ಕಳೆದರೂ ಬೇಡಿಕೆ ಈಡೇರಿಸಿಲ್ಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೋರಾಟ ಆರಂಭವಾಗಿ ಈಗಾಗಲೇ 82 ದಿನ ಕಳೆದಿದ್ದು, 100 ದಿನದೊಳಗೆ ಸಮುದಾಯದ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಅನಿವಾರ್ಯವಾಗಿ ಉಗ್ರ ಸ್ವರೂಪಕ್ಕೆ ತಿರುಗಲಿದೆ. ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡುತ್ತೇವೆ. ಹೋರಾಟದ ಸ್ವರೂಪ ನಿರೀಕ್ಷಿಸಲಾಗದು’ ಎಂದು ಸಮಿತಿಯ ರಾಜ್ಯ ಸಂಚಾಲಕ ರಾಜಣ್ಣ ಹೇಳಿದರು.

ಅನ್ಯಾಯ ಖಂಡನೀಯ: ‘ಹೋರಾಟದ 100 ದಿನಗಳು ಮಾತ್ರ ಶಾಂತಿ. ಆ ನಂತರ ಕ್ರಾಂತಿಯಷ್ಟೇ. ಶ್ರೀರಾಮನನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಜನಾಂಗಕ್ಕೆ ಸರ್ಕಾರ ಅನ್ಯಾಯ ಮಾಡುತ್ತಿರುವುದು ಖಂಡನೀಯ’ ಎಂದು ಸಮಿತಿಯ ರಾಜ್ಯ ಸಂಚಾಲಕಿ ಶುಭಾ ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಯ ರಾಜ್ಯ ಸಂಚಾಲಕರಾದ ರಾಧಾ, ದೇವರಾಜ್‌, ನರಸಿಂಹಯ್ಯ, ಶ್ರೀನಿವಾಸ್‌ನಾಯಕ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.