ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರ ಮುಕ್ತ ಕೋಲಾರಕ್ಕೆ ಸಂಕಲ್ಪ

ಜಾನುವಾರುಗಳಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಪಶುಪಾಲನಾ ಇಲಾಖೆ ಸಿದ್ಧತೆ
Last Updated 29 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಕೋಲಾರ: ಜಾನುವಾರುಗಳನ್ನು ಬಾಧಿಸುವ ಕಾಲುಬಾಯಿ ಜ್ವರವನ್ನು ಹತೋಟಿಗೆ ತಂದು ಜಿಲ್ಲೆಯನ್ನು ಕಾಲುಬಾಯಿ ಜ್ವರ ಮುಕ್ತ ಜಿಲ್ಲೆಯಾಗಿ ಮಾಡಲು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಪಣ ತೊಟ್ಟಿದೆ.

ಹೈನುಗಾರಿಕೆಯು ಜಿಲ್ಲೆಯ ಜೀವನಾಡಿಯಾಗಿದ್ದು, ಬಹುಪಾಲು ರೈತರು ಕೃಷಿಯ ಜತೆಗೆ ಉಪ ಕಸುಬಾಗಿ ಜಾನುವಾರು ಸಾಕಿದ್ದಾರೆ. ಹೈನೋದ್ಯಮವು ರೈತರ ಪ್ರಮುಖ ಆದಾಯ ಮೂಲವಾಗಿದೆ. ರೈತರು ಹಸು ಹಾಗೂ ಎಮ್ಮೆ ಹಾಲನ್ನು ಡೇರಿಗೆ ಹಾಕಿ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಕಾಲುಗಳಲ್ಲಿ ಗೊರಸಲು ಹೊಂದಿರುವ ದನ, ಎಮ್ಮೆ ಮತ್ತು ಹಂದಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಈ ರೋಗ ಬರುತ್ತದೆ. 2017ರಲ್ಲಿ ಜಿಲ್ಲೆಯ ಕೋಲಾರ, ಮಾಲೂರು ಮತ್ತು ಮುಳಬಾಗಿಲು ತಾಲ್ಲೂಕಿನ ವಿವಿಧೆಡೆ ಹಸು, ಕರು ಹಾಗೂ ಎಮ್ಮೆ ಸೇರಿದಂತೆ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು.

ಹೀಗಾಗಿ ಇಲಾಖೆಯು ಕಾಲುಬಾಯಿ ಜ್ವರಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ಜಿಲ್ಲೆಯಾದ್ಯಂತ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಲು ಅಭಿಯಾನ ಆರಂಭಿಸಿದೆ. ಈ ಹಿಂದೆ 16 ಸುತ್ತುಗಳಲ್ಲಿ ದನ, ಎಮ್ಮೆ ಹಾಗೂ ಹಂದಿಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಲಾಗಿದೆ. 16ನೇ ಸುತ್ತಿನಲ್ಲಿ ಮೊದಲ ಬಾರಿಗೆ ಕುರಿ, ಮೇಕೆಗಳಿಗೂ ಲಸಿಕೆ ಹಾಕಲಾಗಿತ್ತು. ಇದೀಗ 17ನೇ ಸುತ್ತಿನಲ್ಲಿ ಲಸಿಕೆ ಹಾಕಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

45 ದಿನ ಅಭಿಯಾನ: ಒಟ್ಟಾರೆ 45 ದಿನದ ಅಭಿಯಾನದಲ್ಲಿ 2,41,454 ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ಹಾಕುವ ಗುರಿಯಿದೆ. ಅಭಿಯಾನಕ್ಕೆ ಲಸಿಕೆದಾರರು ಮತ್ತು ಮೇಲ್ವಿಚಾರಕರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ.

ವೈದ್ಯಕೀಯ ಸಿಬ್ಬಂದಿಯು ಗ್ರಾಮಗಳಲ್ಲಿ ಸಂಚರಿಸಿ ರೈತರ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕುತ್ತಾರೆ. ಅಭಿಯಾನಕ್ಕೆ ಇಲಾಖೆಯ ಜತೆಗೆ ಕೋಚಿಮುಲ್‌ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. 6 ತಿಂಗಳ ಮೇಲಿನ ಎಲ್ಲಾ ಜಾನುವಾರುಗಳಿಗೂ ಲಸಿಕೆ ಹಾಕಲಾಗುತ್ತದೆ.

ಲಕ್ಷಣಗಳು: ‘ಪಿಕೊರ್ನಾ’ ವೈರಸ್‌ನಿಂದ ಬರುವ ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗವಾಗಿದೆ. ಈ ಸೋಂಕಿಗೆ ತುತ್ತಾದ ಜಾನುವಾರುಗಳ ಗೊರಸಲು ಹಾಗೂ ಬಾಯಿಯ ಭಾಗದಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತವೆ. ಬಾಯಿಯಲ್ಲಿನ ಚಿಕ್ಕ ನೀರ್ಗುಳ್ಳೆಗಳು ಒಡೆದು, ಜಾನುವಾರು ಜೊಲ್ಲು ಸುರಿಸುತ್ತವೆ. ಗೊರಸಲು ಭಾಗದಲ್ಲಿ ಹುಣ್ಣು ಹೆಚ್ಚಾದರೆ ಜಾನುವಾರುಗಳು ಕುಂಟಲು ಆರಂಭಿಸುತ್ತವೆ. ಜತೆಗೆ ಜಾನುವಾರುಗಳಿಗೆ ೧೦೬ರಿಂದ ೧೦೮ ಫ್ಯಾರನ್‌ ಹೀಟ್‌ ಜ್ವರ ಬರುತ್ತದೆ.

ರೋಗಕ್ಕೆ ತುತ್ತಾದ ಜಾನುವಾರು ಮೇವು ತಿನ್ನುವುದಿಲ್ಲ ಮತ್ತು ನೀರು ಕುಡಿಯುವುದಿಲ್ಲ. ಈ ಸೋಂಕು ಒಂದು ಜಾನುವಾರಿನಿಂದ ಮತ್ತೊಂದು ಜಾನುವಾರಿಗೆ ಗಾಳಿ, ನೀರು, ಮೇವಿನ ಮೂಲಕ ಹರಡುತ್ತದೆ. ಸೋಂಕನ್ನು ನಿರ್ಲಕ್ಷಿಸಿದರೆ ಕಾಯಿಲೆಯು ನಾಯಿ ರೋಗಕ್ಕೆ ತಿರುಗಿ ಜಾನುವಾರು ಸಾಯುವ ಸಾಧ್ಯತೆಯಿದೆ.

ಹಾಲು ಕಡಿಮೆ: ಕಾಲುಬಾಯಿ ಜ್ವರದಿಂದ ಹಸು, ಎಮ್ಮೆ, ಕುರಿ, ಮೇಕೆಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಸೋಂಕು ನಾಯಿ ರೋಗಕ್ಕೆ ತಿರುಗಿದರೆ ಜಾನುವಾರು ಗರ್ಭ ಧರಿಸುವ ಸಾಧ್ಯತೆ ಕಡಿಮೆ. ಪದೇ ಪದೇ ಗರ್ಭಧಾರಣೆ ಮಾಡಿಸಿದರೂ ಗರ್ಭ ನಿಲ್ಲುವುದಿಲ್ಲ. ಹಂದಿ, ಕುರಿ ಹಾಗೂ ಮೇಕೆಗಳಿಗೆ ಈ ಸೋಂಕು ತಗುಲಿದರೆ ಮಾಂಸದ ಗುಣಮಟ್ಟ ಕುಸಿದು ದರ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT