ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಟೊಮೆಟೊ ಬೆಳೆಗಾರರ ಬೇಡಿಕೆಗೆ ಸ್ಪಂದನೆ

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಸೇರಿಸಲು ಪ್ರಸ್ತಾವ
Last Updated 14 ಮೇ 2020, 19:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಟೊಮೆಟೊ ಬೆಳೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಸೇರಿಸಬೇಕೆಂಬ ರೈತರ ಬೇಡಿಕೆಗೆ ಸ್ಪಂದಿಸಿರುವ ತೋಟಗಾರಿಕೆ ಇಲಾಖೆಯು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಸೇರಿದಂತೆ ಒಟ್ಟಾರೆ 3 ಋತುಮಾನಗಳಿಂದ ಸುಮಾರು 9 ಸಾವಿರ ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆಯಲಾಗುತ್ತದೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ರೈತರು ಜಲಕ್ಷಾಮದ ನಡುವೆಯೂ ಟೊಮೆಟೊ ಬೆಳೆಯುತ್ತಿದ್ದಾರೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಜಿಲ್ಲೆಯಲ್ಲಿದ್ದು, ಇಲ್ಲಿಂದ ಹೊರ ರಾಜ್ಯ ಹಾಗೂ ವಿದೇಶಕ್ಕೆ ಟೊಮೆಟೊ ರಫ್ತಾಗುತ್ತದೆ. ಜಿಲ್ಲೆಯ ಎಪಿಎಂಸಿಗಳಲ್ಲಿ ವರ್ಷಕ್ಕೆ ₹ 401 ಕೋಟಿಗೂ ಹೆಚ್ಚು ಟೊಮೆಟೊ ವಹಿವಾಟು ನಡೆಯುತ್ತದೆ.

ಸದ್ಯ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ (ಪಿಎಂಎಫ್‌ಬಿವೈ) ಟೊಮೆಟೊಗೆ ಬೆಳೆ ವಿಮೆ ಮಾಡಿಸಲು ಅವಕಾಶವಿದೆ. ಆದರೆ, ಟೊಮೆಟೊ ಬೆಳೆಗೆ ಇಳುವರಿ ಆಧಾರಿತ ವಿಮೆ ನೀಡುತ್ತಿರುವುದರಿಂದ ಜಿಲ್ಲೆಯ ರೈತರಿಗೆ ಸಮಸ್ಯೆಯಾಗಿದೆ.

ಟೊಮೆಟೊ ಬೆಳೆ ಇಳುವರಿ ಅಂದಾಜಿಸಿದಾಗ ಜಿಲ್ಲೆಯಲ್ಲಿ ಈವರೆಗೆ ಇಳುವರಿ ಕುಸಿದಿರುವುದು ತೀರಾ ವಿರಳ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಇಳುವರಿ ಪ್ರಮಾಣ ಹೆಚ್ಚಿದೆ. ಪಿಎಂಎಫ್‌ಬಿವೈ ಅಡಿ ಇಳುವರಿ ಆಧರಿಸಿ ಬೆಳೆ ನಷ್ಟಕ್ಕೆ ವಿಮೆ ನೀಡುತ್ತಿರುವುದರಿಂದ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ ಯಾವೊಬ್ಬ ಟೊಮೆಟೊ ಬೆಳೆಗಾರರು ಬೆಳೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ವಿಮೆ ಮಾಡಿಸಿದರೂ ರೈತರಿಗೆ ಅನುಕೂಲವಾಗುತ್ತಿಲ್ಲ.

ಬೇಡಿಕೆಗೆ ಸ್ಪಂದನೆ: ಪಿಎಂಎಫ್‌ಬಿವೈ ಯೋಜನೆಯಿಂದ ಜಿಲ್ಲೆಯ ಟೊಮೆಟೊ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನ ಇಲ್ಲವಾಗಿದೆ. ಮತ್ತೊಂದೆಡೆ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟ ಸಾಮಾನ್ಯವಾಗಿದೆ. ಆದ ಕಾರಣ ಟೊಮೆಟೊ ಬೆಳೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಸೇರಿಸಬೇಕೆಂದು ರೈತರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ.

ಇದೀಗ ರೈತರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ ಟೊಮೆಟೊ ಬೆಳೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಸೇರಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿನ ಟೊಮೆಟೊ ಬೆಳೆ ವಿಸ್ತೀರ್ಣ, ಟೊಮೆಟೊ ಬೆಳೆಗಾರರು, ಇಳುವರಿ, ವಾರ್ಷಿಕ ವಹಿವಾಟಿನ ಮಾಹಿತಿ ಸೇರಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಜಿಲ್ಲೆಯ ರೈತರು ಇಳುವರಿ ಆಧಾರಿತ ವಿಮೆಯಲ್ಲಿ ನಿಗದಿಪಡಿಸಲಾದ ಮಿತಿಗಿಂತ ಹೆಚ್ಚು ಇಳುವರಿ ಪಡೆಯುತ್ತಿರುವುದರಿಂದ ಟೊಮೆಟೊ ಬೆಳೆಯನ್ನು ಪಿಎಂಎಫ್‌ಬಿವೈ ಯೋಜನೆಯ ಬದಲಿಗೆ ಹವಾಮಾನ ಆಧಾರಿತ ವಿಮಾ ಯೋಜನೆ ವ್ಯಾಪ್ತಿಗೆ ಸೇರಿಸುವುದು ಸೂಕ್ತವೆಂದು ತೋಟಗಾರಿಕೆ ಇಲಾಖೆಯು ಪ್ರಸ್ತಾವದಲ್ಲಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT