ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಾಂಕನ ಆಧರಿಸಿ ಫಲಿತಾಂಶ ಘೋಷಣೆ

ಇಲಾಖೆ ಮಾರ್ಗಸೂಚಿ ಅನುಸರಿಸಿ: ಡಿಡಿಪಿಐ ಸೂಚನೆ
Last Updated 23 ಏಪ್ರಿಲ್ 2021, 16:03 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಹಿನ್ನೆಲೆಯಲ್ಲಿ 6ನೇ ತರಗತಿಯಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ರದ್ದುಪಡಿಸಿರುವುದರಿಂದ ಮೌಲ್ಯಾಂಕನ ಕಾರ್ಯ ಆಧರಿಸಿ ಫಲಿತಾಂಶ ಘೋಷಿಸಲಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್‌ ಹಿನ್ನೆಲೆಯಲ್ಲಿ 6ನೇ ತರಗತಿಯಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಸರಿಯಾಗಿ ನಡೆಸಲು ಸಾಧ್ಯವಾಗದ ಕಾರಣ 2021ರ ಜನವರಿಯಿಂದ ವಿದ್ಯಾಗಮದ ಮೂಲಕ ಪಠ್ಯ ಬೋಧನೆ ಮಾಡಲಾಗಿದೆ’ ಎಂದು ವಿವರಿಸಿದರು.

‘ಮಕ್ಕಳಿಗೆ ಪಠ್ಯ ಬೋಧನೆ ನಡೆಸಿ ಹಲವು ವಿಧಾನಗಳ ಮೂಲಕ ಶಾಲಾ ಹಂತದಲ್ಲಿ ಮೌಲ್ಯಾಂಕನ ಕಾರ್ಯ ನಡೆಸಿಸಲಾಗಿದೆ. ಅದನ್ನು ಆಧರಿಸಿ ಈ ಸಾಲಿನ ಫಲಿತಾಂಶ ನಿರ್ಧರಿಸಬೇಕಾಗಿದೆ. ಇಲಾಖೆ ನೀಡಿರುವ ಮಾನದಂಡದ ಅನ್ವಯ ಶಿಕ್ಷಕರು ಮಕ್ಕಳ ಮೌಲ್ಯಮಾಪನ ನಡೆಸಿ ಅಂಕ ನೀಡಿ, ಫಲಿತಾಂಶ ಘೋಷಿಸಬೇಕು’ ಎಂದು ಸೂಚಿಸಿದರು.

‘ಆನ್‌ಲೈನ್‌ ತರಗತಿಗಳಲ್ಲಿ ನಡೆಸಿದ ಮೌಲ್ಯಮಾಪನ ಮತ್ತಿತರ ಅಂಶಗಳನ್ನು ಪರಿಗಣಿಸಿ 10 ಅಂಕಗಳಿಗೆ ವಿದ್ಯಾರ್ಥಿಗಳು ಗಳಿಸಿದ ಅಂಕ ನಿರ್ಧರಿಸಲು ಸೂಚಿಸಲಾಗಿದೆ. ರೂಪಣಾತ್ಮಕ-2ರಡಿ ವಿದ್ಯಾಗಮ-2, ಭೌತಿಕ ತರಗತಿಗಳಲ್ಲಿ ನಡೆಸಿದ ಘಟಕ ಪರೀಕ್ಷೆಗಳು, ನೀಡಿದ ಚಟುವಟಿಕೆಗಳ ಆಧಾರದ ಮೇಲೆ 10 ಅಂಕಗಳಿಗೆ ಫಲಿತಾಂಶ ನಿರ್ಧರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ವಿದ್ಯಾಗಮ-1 ಮತ್ತು 2, ಭೌತಿಕ ತರಗತಿಗಳು, ಆನ್‌ಲೈನ್‌ ತರಗತಿಗಳಲ್ಲಿ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಒಟ್ಟಾರೆಯಾಗಿ 30 ಅಂಕಗಳಿಗೆ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನೇ ರೂಪಣಾತ್ಮಕ ಪರೀಕ್ಷೆ-3 ಮತ್ತು 4 ಹಾಗೂ ಸಾಧನಾ ಪರೀಕ್ಷೆ 2ಕ್ಕೂ ಸಹ ಪರಿಗಣಿಸಲು ಸೂಚಿಸಲಾಗಿದೆ’ ಎಂದರು.

‘ರೂಪಣಾತ್ಮಕ-1=10 ಅಂಕ+ರೂಪಣಾತ್ಮಕ-2=10 ಅಂಕ+ಸಾಧನಾ ಪರೀಕ್ಷೆ-1=30 ಅಂಕ + 50 ಅಂಕಗಳನ್ನೇ 2 ಮತ್ತು ಮೂರನೇ ರೂಪಣಾತ್ಮಕ, ಸಾಧನಾ ಪರೀಕ್ಷಾ ಅಂಕಗಳೆಂದು ಪರಿಗಣಿಸಿ ಒಟ್ಟಾರೆ 100 ಅಂಕಗಳಿಗೆ ವಿದ್ಯಾರ್ಥಿ ಪಡೆದ ಅಂಕಗಳನ್ನು ಘೋಷಿಸಲಾಗುವುದು. ಇದೇ ಮಾದರಿಯಲ್ಲೇ ಅಂಕಗಳನ್ನು ಮುಖ್ಯ ವಿಷಯಗಳು ಹಾಗೂ ಪಾರ್ಟ್- ಬಿ ವಿಷಯಗಳಿಗೂ ಪರಿಗಣಿಸಿ ವಾರ್ಷಿಕ ಫಲಿತಾಂಶ ಘೋಷಿಸಬೇಕು’ ಎಂದರು.

‘ಶಿಕ್ಷಕರು ಕ್ರೋಢೀಕೃತ ಅಂಕಗಳ ವಹಿಯಲ್ಲಿ ನಮೂದಿಸಿದ ಅಂಕಗಳನ್ನೇ ಸ್ಯಾಟ್ಸ್‌ನಲ್ಲೂ ಕಡ್ಡಾಯವಾಗಿ ನಮೂದಿಸಿ ಫಲಿತಾಂಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದನೆ ಪಡೆದು ಏ.26ರೊಳಗೆ ಫಲಿತಾಂಶ ಘೋಷಿಸಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT