ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ: ಕೃಷ್ಣಬೈರೇಗೌಡ ಹೇಳಿಕೆ

ಬುಧವಾರ, ಜೂನ್ 19, 2019
26 °C

ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ: ಕೃಷ್ಣಬೈರೇಗೌಡ ಹೇಳಿಕೆ

Published:
Updated:

ಕೋಲಾರ: ‘ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ, ಬಿಜೆಪಿಯವರು ಎಷ್ಟೇ ಅಪರೇಷನ್ ಕಮಲ ನಡೆಸಿದರೂ ವಿಫಲವಾಗುವುದು ಖಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಮುಖಂಡರು ಇರುವರೆಗು ನಡೆಸಿರುವ ಆಪರೇಷನ್ ಕಮಲದ ಎಲ್ಲ ಪ್ರಯೋಗ, ವಾಮಮಾರ್ಗಗಳನ್ನು ಮೆಟ್ಟಿ ನಿಂತಿದ್ದೇವೆ. ಅವರು ಏನೇ ಪ್ರಯತ್ನ ನಡೆಸಿದರೂ ವಿಫಲ ಯತ್ನಗಳು ಅಷ್ಟೇ’ ಎಂದು ವ್ಯಂಗ್ಯವಾಡಿದರು.

‘ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸಂಸದ ಉಮೇಶ್ ಜಾಧವ್ ಅವರನ್ನು ಭೇಟಿ ಮಾಡಿದ್ದಕ್ಕೆ ನಮಗೆ ಆತಂಕವಿಲ್ಲ. ಅವರ ಎಲ್ಲ ಪ್ರಯತ್ನ ಮೆಟ್ಟಿ ನಿಲ್ಲುವ ಶಕ್ತಿ ನಮ್ಮಲ್ಲಿದೆ. ಎರಡೂ ಪಕ್ಷಗಳ ಮುಖಂಡರು ಚರ್ಚೆ ನಡೆಸಿ ಸರ್ಕಾರವನ್ನು ಸದೃಢವಾಗಿ ನಿಲ್ಲಿಸಲು ತೀರ್ಮಾನಿಸಿದ್ದಾರೆ’ ಎಂದರು.

‘ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಬಹುಮತ ದೊರೆಯಬಹುದು. ಬಿಜೆಪಿ ಮುಖಂಡರು ನಡೆಸುವ ಸಣ್ಣತನ ರಾಜಕೀಯದಿಂದ ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದೆ. ರಾಜ್ಯದ ಮೈತ್ರಿ ಸರ್ಕಾರ ಜನಪರ ಕೆಲಸ ಮಾಡಿದರೂ ಸಹ ಆ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದರಿಂದಲೇ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಯಿತು’ ಎಂದು ನುಡಿದರು.

‘ಲೋಕಸಭೆ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರದಿದ್ದರೂ ಬಿಜೆಪಿ ಕಳೆದ 12 ತಿಂಗಳಿನಿಂದ ಸರ್ಕಾರ ಉರುಳಿಸಲು ಆಪರೇಷನ್ ಕಮಲದ ನಿರಂತರ ಪ್ರಯತ್ನ ನಡೆಸುತ್ತಾ ವಾಮಮಾರ್ಗದಿಂದ ಶಾಸಕರನ್ನು ಹಣ ಕೊಟ್ಟು ಖರೀದಿಸಿ ಸರ್ಕಾರ ಕೆಡವುವ ಕೆಲಸದಲ್ಲಿ ತೊಡಗಿದ್ದಾರೆ. ಈಗಲೂ ಅದೇ ಕೆಲಸ ಮಾಡುವ ಮುನ್ಸೂಚನೆ ಸಿಕ್ಕಿದೆ. ಅವರಿಗೆ ಇದಕ್ಕಿಂತ ಬೇರೆ ಕೆಲಸ ಎನಿಲ್ಲ’ ಎಂದು ಆರೋಪಿಸಿದರು.

‘ಮೈತ್ರಿ ಸರ್ಕಾರ ಸಮನ್ವಯದಿಂದ ಕೆಲಸ ಮಾಡುತ್ತಿದೆ. ನಮ್ಮಲ್ಲಿನ ಕೆಲ ಸದಸ್ಯರು ಅಚಾತುರ್ಯದಿಂದ ಹೇಳಿದ ಮಾತುಗಳಿಗೆ ಅಪಾರ್ಥ ಕಲ್ಪಿಸಿ ಗೊಂದಲ ವಾತಾವರಣ ಸೃಷ್ಠಿಸುವ ಕೆಲಸ ನಡೆಯುತ್ತಿದೆ. ಗೊಂದಲಕ್ಕೆ ಎಡೆಮಾಡಿಕೊಟ್ಟಿರುವ ಹೇಳಿಕೆಗಳಿಗೆ ಇನ್ಮು ಮುಂದೆ ಅವಕಾಶ ನೀಡದಂತೆ ಎಚ್ಚೆತ್ತು ಸರ್ಕಾರವನ್ನು ಉಳಿಸಿ ಕೆಲಸ ಮಾಡುವ ಬಗ್ಗೆ ಸಚಿವರು, ಶಾಸಕರಲ್ಲಿ ಸ್ಪಷ್ಟ ಅಭಿಪ್ರಾಯವಿದೆ’ ಎಂದು ತಿಳಿಸಿದರು.

‘ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನನಗೆ ನಾನು ಶಾಸಕನಾಗಿರುವ ಕ್ಷೇತ್ರದಲ್ಲೇ ಬಹುಮತ ಬಂದಿಲ್ಲ. ಆ ವಾತಾವರಣ ರಾಜ್ಯ ಮತ್ತು ರಾಷ್ಟ್ರದ ನಗರದಲ್ಲಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲೂ ಕಂಡುಬಂದಿದೆ. ಈ ರೀತಿ ಇರುವಾಗ ಹಿನ್ನಡೆಗೆ ಬೇರೆ ವ್ಯಕ್ತಿಗಳ ಮೇಲೆ ದೂಷಣೆ ಮಾಡಲು ಹೋದರೆ ಸ್ವಕ್ಷೇತ್ರದಲ್ಲೇ ನನ್ನ ಹಿನ್ನಡೆಗೆ ನಾನು ಯಾರನ್ನು ದೂಷಿಸಲಿ’ ಎಂದು ಪ್ರಶ್ನಿಸಿದರು.

‘ಸೋಲಿಗೆ ಕಾರಣವಾದ ಅಂಶಗಳನ್ನು ಆತ್ಮವಿಮರ್ಶೆ ಮಾಡಿಕೊಂಡರೆ ಭವಿಷ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಬಹುದು. ಸೋಲಿಗೆ ಮತ್ತೊಬ್ಬರ ಮೇಲೆ ಬೆರಳು ತೋರಿಸುವುದು ಸಮಸ್ಯೆಗೆ ಪರಿಹಾರ ಅಲ್ಲ. ಚುನಾವಣೆ ಸಂದರ್ಭದಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಆತ್ಮಾವಲೋಕನ ನಡೆಸಿ ಪಕ್ಷ ಕಟ್ಟುವ ಕುರಿತು ಚರ್ಚೆಯಾಗುತ್ತಿದೆ. ಮೈತ್ರಿ ಧರ್ಮ ಉಲ್ಲಂಘಿಸಿದವರ ವಿರುದ್ದ ಶಿಸ್ತು ಕ್ರಮದ ಹಂತಕ್ಕೆ ಇನ್ನೂ ಹೋಗಿಲ್ಲ’ ಎಂದು ಹೇಳಿದರು.

‘ಇವಿಎಂ ಕುರಿತು ರಾಷ್ಟ್ರ ಮಟ್ಟದ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಇವಿಎಂ ಕುರಿತು ಜನರಲ್ಲಿ ಮತ್ತು ನಾಯಕರಲ್ಲಿ ವಿಶ್ವಾಸ, ನಂಬಿಕೆ ಮೂಡಿಸುವ ಕೆಲಸ ಚುನಾವಣಾ ಆಯೋಗ ಮಾಡಿಲ್ಲ. ಅನುಮಾನಕ್ಕೆ ಅಂತಿಮ ಹಾಕಲು, ನ್ಯೂನ್ಯತೆ ಸರಿಮಾಡಿಕೊಂಡು ಜನರಲ್ಲಿ ನಂಬಿಕೆ ತರುವ ಕೆಲಸವನ್ನು ಯಾಕೆ ಮಾಡಲು ಆಗುತ್ತಿಲ್ಲ ಎಂಬುದಕ್ಕೆ ಆಯೋಗ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು.

ಸಚಿವ ಶಿವಶಂಕರರೆಡ್ಡಿ, ಶಾಸಕರಾದ ವಿ.ಮುನಿಯಪ್ಪ, ಎಸ್.ಎನ್.ನಾರಾಯಣಸ್ವಾಮಿ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !