ಗುರುವಾರ , ಜುಲೈ 29, 2021
20 °C
ಕೊರೊನಾ ಕಾರಣಕ್ಕೆ ದೇವಾಲಯಗಳು ಬಂದ್‌: ಭಕ್ತರಿಗೆ ನಿರ್ಬಂಧ

ಕೋಲಾರ | ಧಾರ್ಮಿಕ ದತ್ತಿ ಇಲಾಖೆಗೆ ಆದಾಯ ಖೋತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌–19 ಕಾರಣಕ್ಕೆ ಸರ್ಕಾರದ ಆದೇಶದಂತೆ ಜಿಲ್ಲೆಯ ದೇವಾಲಯಗಳನ್ನು ಎರಡೂವರೆ ತಿಂಗಳಿಂದ ಬಂದ್‌ ಮಾಡಿದ್ದರಿಂದ ಧಾರ್ಮಿಕ ದತ್ತಿ ಇಲಾಖೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಬರುತ್ತಿದ್ದ ಕೋಟ್ಯಂತರ ರೂಪಾಯಿ ಆದಾಯ ಖೋತಾ ಆಗಿದೆ.

ಜಿಲ್ಲೆಯ ವಿವಿಧೆಡೆ ಪುರಾಣ ಪ್ರಸಿದ್ಧ ದೇವಾಲಯಗಳಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಭಕ್ತರು ಈ ದೇವಾಲಯಗಳಲ್ಲಿನ ಹುಂಡಿಗೆ ಕಾಣಿಕೆ ಅಥವಾ ದೇಣಿಗೆ ರೂಪದಲ್ಲಿ ಹಾಕುವ ಹಣವು ಧಾರ್ಮಿಕ ದತ್ತಿ ಇಲಾಖೆಯ ಪ್ರಮುಖ ಆದಾಯ ಮೂಲವಾಗಿದೆ.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಹುಂಡಿಯಲ್ಲಿ ಸಂಗ್ರಹವಾಗುವ ದೇಣಿಗೆ ಹಣದ ಆಧಾರದಲ್ಲಿ ಎ, ಬಿ ಹಾಗೂ ಸಿ ದರ್ಜೆಯ ದೇವಾಲಯಗಳೆಂದು ವಿಂಗಡಿಸಲಾಗಿದೆ. ಜಿಲ್ಲೆಯಲ್ಲಿ ಎ ದರ್ಜೆಯ 2 ಮತ್ತು ಬಿ ದರ್ಜೆಯ 13 ದೇವಾಲಯಗಳಿವೆ. ಜತೆಗೆ ಸಿ ದರ್ಜೆಯ 1,323 ದೇವಾಲಯಗಳಿವೆ.

ಈ ಪೈಕಿ ಎ ದರ್ಜೆಯ ದೇವಾಲಯದ ಹುಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ವರ್ಷಕ್ಕೆ ಸುಮಾರು ₹ 4 ಕೋಟಿ ದೇಣಿಗೆ ಸಂಗ್ರಹವಾಗುತ್ತದೆ. ಬಿ ಹಾಗೂ ಸಿ ದರ್ಜೆ ದೇವಾಲಯಗಳಲ್ಲಿ ಸುಮಾರು ₹ 1 ಕೋಟಿ ದೇಣಿಗೆ ಸಂಗ್ರಹವಾಗುತ್ತದೆ.

ಭಕ್ತ ಸಾಗರ: ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೆಜಿಎಫ್ ತಾಲ್ಲೂಕಿನ ಗುಟ್ಟಹಳ್ಳಿಯ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವು ಎ ದರ್ಜೆಯ ದೇವಾಲಯಗಳಾಗಿವೆ. ಈ ಎರಡೂ ದೇವಾಲಯಗಳಲ್ಲಿ ವರ್ಷಕ್ಕೆ ತಲಾ ₹ 1 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹವಾಗುತ್ತದೆ.

ಕೋಲಾರ ತಾಲ್ಲೂಕಿನ ಸೀತಿ ಗ್ರಾಮದ ಪತೇಶ್ವರ ಬೈರವೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ ವರ್ಷಕ್ಕೆ ಸುಮಾರು ₹ 60 ಲಕ್ಷ ದೇಣಿಗೆ ಸಂಗ್ರಹವಾಗುತ್ತದೆ. ಈ ಮೂರೂ ದೇವಾಲಯಗಳಿಗೆ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಭಕ್ತ ಸಾಗರವೇ ಹರಿದು ಬರುತ್ತದೆ. ಕೊರೊನಾ ಸೋಂಕಿನ ಹರಡುವಿಕೆ ತಡೆಗಾಗಿ ಸರ್ಕಾರ ಎರಡೂವರೆ ತಿಂಗಳಿಂದ ದೇವಾಲಯಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಿರುವುದರಿಂದ ಹುಂಡಿಯಲ್ಲಿ ದೇಣಿಗೆ ಹಣ ಸಂಗ್ರಹವಾಗಿಲ್ಲ. ಹೀಗಾಗಿ ಇಲಾಖೆಯ ಆದಾಯ ಮೂಲಕ್ಕೆ ಹೊಡೆತ ಬಿದ್ದಿದೆ.

ಇಲಾಖೆ ಸಿದ್ಧತೆ: ಕೇಂದ್ರ ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯು ಜಿಲ್ಲೆಯಲ್ಲಿ ಜೂನ್ 8ರಿಂದ ದೇವಾಲಯಗಳನ್ನು ತೆರೆಯಲು ಸಿದ್ಧತೆ ನಡೆಸಿದೆ. ದೇವಸ್ಥಾನ ಹಾಗೂ ಇಲಾಖೆಯ ಸಿಬ್ಬಂದಿ ದೇವಾಲಯಗಳ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ದೇವಾಲಯಗಳ ಆವರಣವನ್ನು ಕೊರೊನಾ ಸೋಂಕು ನಿವಾರಕ ದ್ರಾವಣದಿಂದ ಸ್ಯಾನಿಟೈಸ್‌ ಮಾಡಲಾಗುತ್ತಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗೆ ದೇವಸ್ಥಾನಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಇಲಾಖೆಯು ಆದೇಶ ಹೊರಡಿಸಿದೆ. ಈ ಆದೇಶದನ್ವಯ ಜಿಲ್ಲೆಯ ದೇವಾಲಯಗಳಲ್ಲಿ ಭಕ್ತರು ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ವೃತ್ತಾಕಾರ ಹಾಗೂ ಚೌಕಾಕಾರದಲ್ಲಿ ಪಟ್ಟಿ ಹಾಕಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು