ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370ನೇ ವಿಧಿ ರದ್ದು: ಸಿಪಿಎಂ ಪ್ರತಿಭಟನೆ

ನರೇಂದ್ರ ಮೋದಿ– ಅಮಿತ್‌ ಷಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ
Last Updated 7 ಆಗಸ್ಟ್ 2019, 13:51 IST
ಅಕ್ಷರ ಗಾತ್ರ

ಕೋಲಾರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸಿಪಿಎಂ ಕಾರ್ಯಕರ್ತರು ಇಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು 370ನೇ ವಿಧಿ ರದ್ದುಪಡಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ವಿರುದ್ಧ ಘೋಷಣೆ ಕೂಗಿದರು.

‘ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ವಿಚಾರದಲ್ಲಿ ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಕ್ರಮ ಕೈಗೊಂಡಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ, ಜಾತ್ಯತೀತತೆ ಮತ್ತು ಸಂವಿಧಾನದ ಮೇಲೆ ನಡೆಸಿರುವ ದಾಳಿಯಾಗಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಕಿಡಿಕಾರಿದರು.

‘ಶತ್ರು ರಾಷ್ಟ್ರ ಪಾಕಿಸ್ತಾನದಿಂದ ರಕ್ಷಣೆ ಪಡೆಯಲು ಜಮ್ಮು ಕಾಶ್ಮೀರದ ಜನ ಭಾರತವನ್ನು ಒಪ್ಪಿಕೊಂಡಿದ್ದರು. ಸಂವಿಧಾನದ 370ನೇ ವಿಧಿ ಮೂಲಕ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮತ್ತು ಸ್ವಾಯತತ್ತೆ ನೀಡಲು ಭಾರತ ಬದ್ಧತೆ ತೋರಿತ್ತು. ಆದರೆ, ಕೇಂದ್ರವು ಈ ವಿಧಿ ರದ್ದುಪಡಿಸುವ ಮೂಲಕ ಆ ಜನರಿಗೆ ದ್ರೋಹ ಬಗೆದಿದೆ’ ಎಂದು ದೂರಿದರು.

ಖಂಡನೀಯ: ‘ಬಿಜೆಪಿ ಮತ್ತು ಆರ್‍ಎಸ್‍ಎಸ್ ಮುಖಂಡರು ಒಕ್ಕೂಟದ ತತ್ವ ಸಹಿಸದೆ ಜಮ್ಮು ಕಾಶ್ಮೀರವನ್ನು ಪಾಕ್‌ ಅಕ್ರಮಿತ ಪ್ರದೇಶದಂತೆ ಕಾಣುತ್ತಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಕಡೆಗಣಿಸಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿರುವುದು ಸರಿಯಲ್ಲ. ಜಾತ್ಯಾತೀತ ರಾಷ್ಟ್ರದಲ್ಲಿ ಹಿಂದುತ್ವ ಹೇರುತ್ತಿರುವುದು ಖಂಡನೀಯ' ಎಂದು ಸಿಪಿಎಂ ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಟಿ.ಎಂ.ವೆಂಕಟೇಶ್‌ ದೂರಿದರು.

‘ಬಿಜೆಪಿಯು ದೇಶದಲ್ಲಿ ಕೋಮುಗಲಭೆ ನಿಯಂತ್ರಿಸುವುದು ಬಿಟ್ಟು ಪ್ರಚೋದನೆ ನೀಡುವ ಉದ್ದೇಶದಿಂದ 370ನೇ ವಿಧಿ ರದ್ದುಪಡಿಸಿದೆ. ಸರ್ವಾಧಿಕಾರಶಾಹಿ ಕ್ರಮಕ್ಕೆ ಪೂರ್ವಭಾವಿಯಾಗಿ ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಸೇನೆ ನಿಯೋಜಿಸಲಾಗಿದೆ. ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಕ್ಕಟ್ಟು ಸೃಷ್ಟಿಸಿದೆ: ‘ಜಮ್ಮು ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ ಮತ್ತು ನ್ಯಾಯದ ಹಕ್ಕಿದೆ. ಆದರೆ, ಕೇಂದ್ರವು ಕಣಿವೆ ರಾಜ್ಯದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಸಿದೆ. ಮೋದಿ ನೇತೃತ್ವದ ಸರ್ಕಾರ ಸ್ಥಳೀಯ ಜನರ ಒಪ್ಪಿಗೆಯಿಲ್ಲದೆ ಸರ್ವಾಧಿಕಾರಿಯಂತೆ ಫರ್ಮಾನು ಹೇರಿದೆ. ಕೇಂದ್ರದ ಈ ನಿರ್ಧಾರದಿಂದ ಕಣಿವೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಲಿದೆ. ಹೇರುತ್ತಿದೆ ಎಂಬುದನ್ನು ಇದೇ ತೋರಿಸುತ್ತದೆ' ಎಂದು ಪ್ರತಿಭಟನಾಕಾರರು ದೂರಿದರು.

‘ಬಿಜೆಪಿ ತನ್ನ ಸರ್ವಾಧಿಕಾರಿ ಧೋರಣೆ ಬಿಡಬೇಕು. ಜಮ್ಮು ಕಾಶ್ಮೀರಕ್ಕೆ ಮೊದಲಿನಂತೆಯೇ ವಿಶೇಷ ಸ್ಥಾನಮಾನ ನೀಡಬೇಕು. ಸಂವಿಧಾನದ 370ನೇ ವಿಧಿ ಸಮರ್ಥಿಸಬೇಕು. ಇಲ್ಲದಿದ್ದರೆ ದೇಶದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಿಪಿಎಂ ಜಿಲ್ಲಾ ಕಾರ್ಯಕಾರಿ ಮಂಡಳಿ ಕಾರ್ಯದರ್ಶಿ ಶ್ರೀನಿವಾಸ್‌, ತಾಲ್ಲೂಕು ಕಾರ್ಯಕಾರಿ ಮಂಡಳಿ ಸದಸ್ಯ ಶ್ರೀರಾಮ್‌, ಪದಾಧಿಕಾರಿಗಳಾದ ಪಿ.ಸೂರ್ಯನಾಯಣ, ದೇವರಾಜ್, ಶಂಕರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT