ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯದಲ್ಲಿ ಬಲಪಂಥೀಯರ ದಬ್ಬಾಳಿಕೆ’

Last Updated 28 ಜನವರಿ 2021, 14:09 IST
ಅಕ್ಷರ ಗಾತ್ರ

ಕೋಲಾರ: ‘ಅನ್ಯಭಾಷಿಕರು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಮುಂದೆ ಬಂದರೂ ಬಲಪಂಥೀಯರು ಅವಕಾಶ ಕೊಡುತ್ತಿಲ್ಲ. ಸಾಹಿತ್ಯಕ್ಕೆ ಹಾಗೂ ಕನ್ನಡಕ್ಕೆ ಆದ್ಯತೆ ಸಿಗದೆ ತಳಮಳ, ತಲ್ಲಣ ಸೃಷ್ಟಿಯಾಗಿದೆ’ ಎಂದು ವಿಮರ್ಶಕ ಸರ್ಜಾಶಂಕರ್ ಹರಳಿಮಠ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಕನ್ನಡ ನಡಿಗೆ ವಿಶ್ವಮಾನವತೆ ಕಡೆಗೆ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಬಲಪಂಥೀಯರ ದಬ್ಬಾಳಿಕೆಯಿಂದ ಅಲ್ಪಸಂಖ್ಯಾತ ಸಮುದಾಯದ ಸಾಹಿತಿಗಳ ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಿಷಾದಿಸಿದರು.

‘ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಸಂತ ಶಿಶುನಾಳ ಶರೀಫರ ಹಾದಿಯನ್ನು ಹೆಚ್ಚಾಗಿ ಹಿಂದುತ್ವದವರೆ ಓಲೈಸುವ ಕಾರ್ಯ ನಿರ್ವಹಿಸಿದ್ದರು. ನಿಸಾರ್ ಅಹಮ್ಮದ್‌ ಅವರನ್ನು ನಿತ್ಯೋತ್ಸವ ಕವಿ ಎಂದು ಬಿಂಬಿಸಲಾಗಿತ್ತು. ಅವರಂತೆ ಅನೇಕ ಮುಸ್ಲಿಂ ಕವಿಗಳು ಸೂಫಿ, ಶಾಹಿರಿ ರಚಿಸಿದ್ದಾರೆ. ಎಲ್ಲಾ ಧರ್ಮ, ಜಾತಿಯ ಸಾಹಿತಿಗಳನ್ನು ಗುರುತಿಸಬೇಕು. ಸಾಹಿತ್ಯ ಬೆಳೆಸಲು ಅನ್ಯಭಾಷಿಕರು ಮುಂದಾಳತ್ವವಹಿಸಬೇಕು’ ಎಂದು ಆಶಿಸಿದರು.

ಸಂಪರ್ಕ ಸೇತುವೆ: ‘ಕ್ರೈಸ್ತ ಧರ್ಮದವರು ಬ್ರಿಟಿಷರ ಕಾಲದಿಂದಲೂ ಕನ್ನಡದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಸಮಾನತೆ, ಶಿಕ್ಷಣ ಹಾಗೂ ಆಧುನಿಕತೆ ವಿಚಾರದಲ್ಲಿ ಕ್ರೈಸ್ತ ಸಮುದಾಯದವರು ಕನ್ನಡ ಉಳಿಸುವ ಸಂಪರ್ಕ ಸೇತುವೆಯಾಗಿದ್ದರು’ ಎಂದು ಬೆಂಗಳೂರಿನ ವರ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಸಿ.ಚಂದ್ರಪ್ಪ ತಿಳಿಸಿದರು.

‘ವಿದೇಶದಿಂದ ಬಂದ ಕ್ರೈಸ್ತ ಮಿಷನರಿಗಳವರು ಇಲ್ಲಿಯ ಭಾಷೆ ಕಲಿತು ಅದಕ್ಕೆ ಆದ್ಯತೆ ನೀಡಿ ನಿಘಂಟು ಕೊಟ್ಟಿದ್ದಾರೆ. ಅವರ ಸೇವೆ ಎಂದಿಗೂ ಮರೆಯಬಾರದು. ಕ್ರೈಸ್ತ ಧರ್ಮದವರು ಮುದ್ರಣ ತಂತ್ರಜ್ಞಾನ ಆವಿಷ್ಕಾರದ ಮೂಲಕ ಓದುಗರಿಗೆ ಕನ್ನಡ ಲಿಪಿ ತಲುಪಿಸಿದರು. ಹಳಗನ್ನಡದ ಶಿಲಾನ್ಯಾಸ, ಒಲೆಗರಿಗಳನ್ನು ಕಾಪಾಡುವ ಕೆಲಸ ಮಾಡಿದ್ದಾರೆ’ ಎಂದು ಬಣ್ಣಿಸಿದರು.

‘ಕರ್ನಾಟಕದಲ್ಲಿ ಕನ್ನಡಿಗರಿಂದಲೇ ಆಗದ ಕೆಲಸವನ್ನು ಬೇರೆ ಸಮುದಾಯದ ಮುಖ್ಯಸ್ಥರು ಮಾಡಿದ್ದಾರೆ. ಆದರೂ ಅವರ ಸೇವೆ ಮತ್ತು ಕನ್ನಡಕ್ಕೆ ಕ್ರೈಸ್ತ ಧರ್ಮದವರು ನೀಡಿರುವ ಕೊಡುಗೆ ಮರೆತು ಆ ಧರ್ಮೀಯರು ಅನ್ಯ ದೇಶದಿಂದ ಬಂದವರು ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT