ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ‘

ಸ್ವಚ್ಛತಾ ಅಭಿಯಾನದಲ್ಲಿ ಪರ್ವ ಸಂಸ್ಥೆ ಸದಸ್ಯ ಹರಿನಾಥ್ ಆತಂಕ
Last Updated 31 ಜನವರಿ 2021, 8:27 IST
ಅಕ್ಷರ ಗಾತ್ರ

ಕೋಲಾರ: ‘ಅತಿಯಾಗಿ ಪ್ಲಾಸ್ಟಿಕ್ ಬಳಕೆಯಿಂದ ಮನುಕುಲದ ಭೂಮಿ ಮೇಲಿನ ಸಕಲ ಜೀವರಾಶಿಗೂ ಅಪಾಯವಾಗುತ್ತಿದೆ’ ಎಂದು ಪರ್ವ ಸ್ವಯಂ ಸೇವಾ ಸಂಸ್ಥೆ ಸದಸ್ಯ ಹರಿನಾಥ್ ಆತಂಕ ವ್ಯಕ್ತಪಡಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಹಾಗೂ ಪರ್ವ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ಅಂದರಹಳ್ಳಿ ಗ್ರಾಮದ ಸೂರ್ಯ ಮಲ್ಲೇಶ್ವರ ಬೆಟ್ಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿ, ‘ಮನುಷ್ಯನ ಜೀವನ ಶೈಲಿಯಿಂದ ಭೂಮಿ ಮೇಲಿನ ಎಲ್ಲಾ ಜೀವರಾಶಿಗಳಿಗೂ ಅಪಾಯವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶಾಲಾ ಕಾಲೇಜು ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರೆ ಸಮಾಜವನ್ನು ಬದಲಾವಣೆ ತರಲು ಸಹಕಾರಿಯಾಗುತ್ತದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರೆ ಶೇ 50ರಷ್ಟು ಪರಿಸರ ಮಾಲಿನ್ಯ ನಿಯಂತ್ರಿಸಬಹುದು’ ಎಂದು ಸಲಹೆ ನೀಡಿದರು.

‘ಕಾಡಿಗೆ ಬೆಂಕಿ ಹಚ್ಚುವುದು, ಮೋಜ ಮಸ್ತಿ ನೆಪದಲ್ಲಿ ಕಾಡು ನಾಶ ಮಾಡಿ ರೆಸಾರ್ಟ್ ನಿರ್ಮಾಣದಿಂದಾಗಿ ನೆಮ್ಮದಿಯಿಂದ ಜೀವಿಸುತ್ತಿದ್ದ ವನ್ಯಜೀವಿಗಳು ಆಹಾರ ಹುಡುಕುತ್ತಾ ನಾಡಿಗೆ ಬಂದು ಮನಷ್ಯನ ಕೈಯಲ್ಲಿ ಬಲಿಯಾಗುತ್ತಿವೆ’ ಎಂದು ವಿಷಾದಿಸಿದರು.

‘ಪರಿಸರ ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸರ್ವನಾಶವಾಗಲಿದೆ. ಪರಿಸರ ರಕ್ಷಣೆ ಎಂದರೆ ನಮ್ಮ ರಕ್ಷಣೆ ಎಂದು ಅರ್ಥ ಮಾಡಿಕೊಳ್ಳಬೇಕು. ಚಾರಣದ ನೆಪದಲ್ಲಿ ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪರಿಸರ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

‘ಎಲ್ಲರೂ ಪ್ಲಾಸ್ಟಿಕ್ ಮಿತ ಬಳಕೆ ಅಭ್ಯಾಸ ಮಾಡಬೇಕು. ಪ್ರವಾಸಿ ಸ್ಥಳಗಳಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕಾದರೆ ಪ್ರವಾಸಿಗರು ಮೊದಲು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಬೇಕು. ಮಾರುಕಟ್ಟೆಗೆ ಹೋಗುವಾಗ ಮರೆಯದೆ ಬಟ್ಟೆಯ ಅಥವಾ ಸೆಣಬಿನ ಕೈಚೀಲ ಕೊಂಡೊಯ್ಯಬೇಕು’ ಎಂದು ತಿಳಿಸಿದರು.

ಕಸ ಪ್ರತ್ಯೇಕಿಸಿ: ‘ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಮನಬಂದಂತೆ ಬೀದಿ ಬದಿಯಲ್ಲಿ ಅಥವಾ ಚರಂಡಿಯಲ್ಲಿ ಎಸೆಯಬಾರದು. ಬದಲಿಗೆ ಪೌರ ಕಾರ್ಮಿಕರಿಗೆ ಕಸ ವಿಲೇವಾರಿ ಮಾಡಬೇಕು. ಜತೆಗೆ ಒಣ ಮತ್ತು ಹಸಿ ಕಸ ಪ್ರತ್ಯೇಕಿಸಿ ಕೊಡಬೇಕು’ ಎಂದು ಸ್ಕೌಟ್ಸ್‌ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್ ಹೇಳಿದರು.

‘ಪ್ಲಾಸ್ಟಿಕ್ ಬಳಕೆ ನಿರ್ಬಂಧದ ಬಗ್ಗೆ ಭಾಷಣೆ ಮಾಡಿದರೆ ಸಾಲದು. ಮೊದಲು ನಾವು ಬದಲಾಗಿ ಇತರರಿಗೆ ಮಾದರಿಯಾಗಬೇಕು. ಸ್ಕೌಟ್ಸ್ ಮತ್ತು -ಗೈಡ್ಸ್ ಸಂಸ್ಥೆ ಸದಸ್ಯರು ಮನೆಯಂಗಳದಲ್ಲಿ ಕೈತೋಟ ನಿರ್ಮಿಸಬೇಕು. ಮನೆಯ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಕೈತೋಟಕ್ಕೆ ಬಳಸಿದರೆ ಪರಿಸರ ಸಂರಕ್ಷಣೆಯ ಜತೆಗೆ ಆರ್ಥೀಕವಾಗಿ ಸಹಕಾರಿಯಾಗುತ್ತದೆ’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ ತಿಳಿಸಿದರು.

ಪರ್ವ ಸಂಸ್ಥೆ ಸದಸ್ಯರಾದ ರವಿ, ಕೇಶವ, ಅನಿತಾ, ಕಾರ್ತಿಕ್‌ ಪ್ರವೀಣ್, ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT