ಸೋಮವಾರ, ಜನವರಿ 18, 2021
25 °C
ವರ್ತೂರು ಪ್ರಕಾಶ್‌ ವಿರುದ್ಧ ಶಾಸಕ ಕೆ.ಶ್ರೀನಿವಾಸಗೌಡ ವ್ಯಂಗ್ಯ

ಸೋಲುಂಡರೂ ಮೊಂಡಾಟ ಬಿಟ್ಟಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ವಿಧಾನಸಭಾ ಚುನಾವಣೆಯಲ್ಲಿ ಜನ ಮೂರನೇ ಸ್ಥಾನ ಕೊಟ್ಟರೂ ವರ್ತೂರು ಪ್ರಕಾಶ್ ಮೊಂಡಾಟ ಇನ್ನೂ ನಿಂತಿಲ್ಲ. ಕ್ಷೇತ್ರದಲ್ಲಿ ಅವರ ಕಥೆ ಮುಗಿದಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ವ್ಯಂಗ್ಯವಾಡಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ರಸ್ತೆ ಅಭಿವೃದ್ಧಿ ಮತ್ತು ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಎಲ್ಲಿಂದಲೋ ಬಂದು ಇಲ್ಲಿ ನಾಟಕ ಮಾಡಲು ಮುಂದಾದರೆ ಜನ ಸಹಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಜನರ ಮಧ್ಯೆ ವಿಷಬೀಜ ಬಿತ್ತಿ ಗ್ರಾಮಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಆಟಗಳಿಗೆ ಅವಕಾಶ ನೀಡದೆ ಯುವಕರು ನೆಮ್ಮದಿಯಿಂದ ಬದುಕಬೇಕು ಎಂದರು.

ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದೆ. ಆದರೆ ವರ್ತೂರ್ ಪ್ರಕಾಶ್ ಗ್ರಾಮಗಳಿಗೆ ತೆರಳಿ ಬಲವಂತವಾಗಿ ಹೂವಿನ ಹಾರ ಹಾಕಿಸಿಕೊಂಡು ಗೆದ್ದವರೆಲ್ಲಾ ನಮ್ಮವರೇ ಎಂದು ಹೇಳಿ ಕೊಳ್ಳುತ್ತಿದ್ದಾರೆ. ಗ್ರಾಮಗಳಿಗೆ ತಾವೇ ಹೂವಿನಹಾರ ಕೊಂಡೊಯ್ದು ಜೈಕಾರ ಹಾಕಿಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು.

ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬೇಕು. ಯಾವುದೇ ಕಾಮಗಾರಿಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಕಳಪೆ ಕಾಮಗಾರಿಯಾಗದ ರೀತಿಯಲ್ಲಿ ಕೆಲಸ ಮಾಡಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು, ಕಳಪೆ ಕಾಮಗಾರಿಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ಮೆಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ದೇಶದ ಪ್ರಗತಿಯ ಪಥದಲ್ಲಿ ಸಾಗಬೇಕಾದರೆ ಗ್ರಾಮಗಳು ಅಭಿವೃದ್ಧಿ ಕಾಣಬೇಕು. ಗ್ರಾಮಗಳಲ್ಲಿ ಪ‍ಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕು. ನಾನು ಒಂದು ಪಕ್ಷದ ಶಾಸಕನಾಗದೆ ಕ್ಷೇತ್ರದ ಎಲ್ಲ ಜನರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ನಾನು ಮೊದಲ ಆದ್ಯತೆ ನೀಡುತ್ತೇನೆ. ವಿರೋಧಿಗಳ ಯಾವುದೇ ಟೀಕೆಗಳಿಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದೆ ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಕೋರಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಹೇಳಿದರು.

ತಾಲ್ಲೂಕಿನ ಚಿಕ್ಕನಹಳ್ಳಿ, ವೆಂಕಟಾಪುರ, ಚಿಕ್ಕಯ್ಯೂರು, ಕಡಗಟ್ಟೂರು, ಚನ್ನಸಂದ್ರ ಗ್ರಾಮಗಳಲ್ಲಿ ₹48 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ ದಯಾನಂದ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ತಾ.ಪಂ ಸದಸ್ಯ ಪಾಲಾಕ್ಷಿಗೌಡ, ಗ್ರಾಮ ಪಂಚಾಯಿತಿ ಸದಸ್ಯ ನಂಜುಡಗೌಡ, ಹರಿಪ್ರಸಾದ್, ಸುರೇಶ್, ರಾಧ ನಾಗೇಶ್, ಗೋವಿಂದಪ್ಪ, ಕೆ.ಎಸ್.ಕೃಷ್ಣಪ್ಪ, ನಾರಾಯಣಸ್ವಾಮಿ, ಸೋಣ್ಣೇಗೌಡ, ಬೈರೇಗೌಡ, ಮುನಿರಾಜು, ಸೊಣ್ಣಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.