ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಗಲೀಕರಣ: ಕಾನೂನು ಉಲ್ಲಂಘನೆ

Last Updated 20 ಜನವರಿ 2021, 15:17 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕೇಂದ್ರದ ರಸ್ತೆಗಳ ಅಗಲೀಕರಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾನೂನು ಉಲ್ಲಂಘಿಸಿದ್ದಾರೆ’ ಎಂದು ಹೈಕೋರ್ಟ್ ವಕೀಲ ವಿಜಯ್‌ಕುಮಾರ್ ಆರೋಪಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರ ನಗರವು ರಾವಣನ ರಾಜ್ಯವಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ’ ಎಂದು ಎಚ್ಚರಿಕೆ ನೀಡಿದರು.

‘ನಗರಸಭೆ ವ್ಯಾಪ್ತಿಯ ದೊಡ್ಡಪೇಟೆ, ಅಮ್ಮವಾರಿಪೇಟೆ, ಎಂ.ಜಿ ರಸ್ತೆ ಆಗಲೀಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಅಧಿಕಾರಿಗಳು ಕಾನೂನು ಪಾಲಿಸುತ್ತಿಲ್ಲ. ಜಿಲ್ಲಾಡಳಿತವು ರಸ್ತೆ ಅಕ್ಕಪಕ್ಕದ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡದೆ ದೌರ್ಜನ್ಯ ನಡೆಸಿದರೆ ಕಾನೂನು ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

‘ನಗರದ ಅಭಿವೃದ್ಧಿಗೆ ಕಟ್ಟಡ ಮಾಲೀಕರು ಸಹಕರಿಸುತ್ತಾರೆ. ಆದರೆ, ರಸ್ತೆ ಅಗಲೀಕರಣಕ್ಕೆ ಹೈಕೋರ್ಟ್‌ನ ಮಧ್ಯಂತರ ತಡೆಯಾಜ್ಞೆ ಇದ್ದರೂ ಅಧಿಕಾರಿಗಳು ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಕಟ್ಟಡ ಮಾಲೀಕರನ್ನು ನಿರಂತರವಾಗಿ ಶೋಷಿಸುತ್ತಿರುವ ಜಿಲ್ಲಾಡಳಿತವು ಭಯದ ವಾತಾವರಣ ಸೃಷ್ಟಿಸಿದೆ. ಕಾನೂನು ಪಾಲಿಸಬೇಕಾದ ಅಧಿಕಾರಿಗಳೇ ಕಾನೂನು ಉಲ್ಲಂಘಿಸಿದರೆ ಹೇಗೆ?’ ಎಂದು ಪ್ರಶ್ನಿಸಿದರು.

‘ದೊಡ್ಡಪೇಟೆ ಮತ್ತು ಎಂ.ಜಿ ರಸ್ತೆ ಅಗಲೀಕರಣ ಮಾಡಬೇಕೆಂದು ಅಧಿಕಾರಿಗಳು ೨೦೧೫ರಲ್ಲೇ ಕಟ್ಟಡಗಳಿಗೆ ಗುರುತು ಹಾಕಿದ್ದರು. ಈ ಸಂಬಂಧ ಕಟ್ಟಡ ಮಾಲೀಕರು ಹೈಕೋರ್ಟ್‌ನ ಮೆಟ್ಟಿಲೇರಿದಾಗ ಕಟ್ಟಡಗಳಿಗೆ ಹಾನಿ ಮಾಡಬಾರದೆಂದು ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಮಾನ್ಯ ಮಾಡದ ಅಧಿಕಾರಿಗಳು ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದರು.

ಮಾನನಷ್ಟ ಮೊಕದ್ದಮೆ: ‘ಕಟ್ಟಡ ಮಾಲೀಕರಿಗೆ ಯಾವುದೇ ಉದ್ಯೋಗವಿಲ್ಲ. ಅಂಗಡಿ ನಡೆದರೆ ಮಾತ್ರ ಅವರು ಜೀವನ ನಡೆಸಲು ಸಾಧ್ಯ. ಜಿಲ್ಲಾಡಳಿತ ಇವರಿಗೆ ಕನಿಷ್ಠ ಪಕ್ಷ ಪರಿಹಾರವನ್ನಾದರೂ ನೀಡಬೇಕು. ನಗರಸಭೆ ಅಧಿಕಾರಿಗಳು ೨೦೨೦ರ ಅಕ್ಟೋಬರ್‌ನಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಕಟ್ಟಡಗಳಿಗೆ ಮತ್ತೊಮ್ಮೆ ಗುರುತು ಹಾಕಿ ಕಟ್ಟಡ ತೆರವಿಗೆ ಆದೇಶಿಸಿದ್ದರು. ಶಾಸಕರು ಸಹ ರಸ್ತೆ ಅಗಲೀಕರಣ ಮಾಡೇ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಮತ್ತು ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT