ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಗಲಿ :ವರ್ಷ ಕಳೆದರೂ ದುರಸ್ತಿಯಾಗದ ರಸ್ತೆಗಳು

ಸಂಚಾರಕ್ಕೆ ಸಂಕಷ್ಟ
Last Updated 5 ಫೆಬ್ರುವರಿ 2023, 7:01 IST
ಅಕ್ಷರ ಗಾತ್ರ

ನಂಗಲಿ (ಮುಳಬಾಗಿಲು): ಈಚೆಗೆ ಸುಮಾರು ಎರಡು ವರ್ಷಗಳಿಂದ ನಿರಂತರವಾಗಿ ಬಿದ್ದ ಮಳೆಗೆ ತಾಲ್ಲೂಕಿನ ಕೆಲವು ಹಳ್ಳಿಗಳ ಡಾಂಬರು ರಸ್ತೆಗಳು ಸಂಪೂರ್ಣವಾಗಿ ಕಿತ್ತು ಬಂದಿದ್ದು ವರ್ಷ ಕಳೆದರೂ ಇನ್ನೂ ದುರಸ್ತಿಯಾಗಿಲ್ಲ.

ಬರಗಾಲವನ್ನು ಎದುರಿಸಿದ್ದ ತಾಲ್ಲೂಕಿನಲ್ಲಿ ಈಚೆಗೆ ಎರಡು ವರ್ಷಗಳಿಂದ ನಿರಂತರವಾಗಿ ಮಳೆ ಬಿದ್ದಿದ್ದರಿಂದ ಕೆರೆ, ಕುಂಟೆಗಳು ತುಂಬಿ ಕೋಡಿ ಹರಿದಿದ್ದರಿಂದ ಜನ ಎಷ್ಟೋ ಖುಷಿ ಪಟ್ಟರು. ಆದರೆ ಅದೇ ಮಳೆಯಿಂದ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಡಾಂಬರು ರಸ್ತೆಯಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದಿವೆ. ಜನ ಮತ್ತು ವಾಹನ ಸವಾರರು ಪರಿತಪಿಸುವಂತಾಗಿದೆ.

ಮುಷ್ಟೂರು ಗ್ರಾಮದಿಂದ ಕೆರಸಿಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಮಲ್ಲೆಕುಪ್ಪದಿಂದ ಪಟ್ರಹಳ್ಳಿ, ಸೂರುಕುಂಟೆ ಮಾರ್ಗವಾಗಿ ಆಂಧ್ರಪ್ರದೇಶದ ವಿ.ಕೋಟ ಕಡೆಗೆ ಸಂಪರ್ಕಿಸುವ ರಸ್ತೆಗಳು, ಮುಷ್ಟೂರಿನಿಂದ ಹೆಬ್ಬಣಿ, ಮುಳಬಾಗಿಲು ಕಡೆಯಿಂದ ಆಲಂಗೂರು ರಸ್ತೆ ಹೀಗೆ ಸುಮಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿಗಳು ಬಿದ್ದು ವರ್ಷ ಕಳೆಯುತ್ತಿವೆ.

ನಂಗಲಿ ಸಿನೆಮಾ ಟಾಕೀಸ್ ಮುಂದೆ ರಸ್ತೆ ಸುಮಾರು ಮೊಣಕಾಲುದ್ದ ಗುಂಡಿ ಬಿದ್ದು ಸುಮಾರು ಎರಡು ವರ್ಷ ಆಗಿದೆ. ಈಗಾಗಲೇ ಐದು ಮಂದಿ ಬಿದ್ದು ಕೈ ಕಾಲುಗಳನ್ನು ಗಾಯ ಮಾಡಿಕೊಂಡಿದ್ದಾರೆ. ಇದೆ ಗುಂಡಿಯಲ್ಲಿ ಸೂರುಕುಂಟೆ ಗ್ರಾಮದ ರಾಮಪ್ಪ ಎಂಬ ವ್ಯಕ್ತಿಯೊಬ್ಬರು ಬಿದ್ದು ತಲೆಗೆ ಬಲವಾದ ಗಾಯ ಮಾಡಿಕೊಂಡು ಸುಮಾರು ಹದಿನೈದು ದಿನಗಳ ಕಾಲ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಮಲ್ಲೆಕುಪ್ಪದಿಂದ ಸೂರುಕುಂಟೆ, ಗುಮ್ಮಕಲ್ಲು, ಮಾರ್ಗವಾಗಿ ಬೈಯಪ್ಪಲ್ಲಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಜನ ಮತ್ತು ವಾಹನ ಸವಾರರು ಓಡಾಡಲಾರದಷ್ಟು ಗುಂಡಿಗಳು -ಬಿದ್ದಿವೆ.

ಗುಮ್ಮಕಲ್ಲು ಮಾರ್ಗವಾಗಿ ಎನ್.ಗಡ್ಡೂರು ನೆರ್ನಹಳ್ಳಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಸತತ ಮಳೆಗಳಿಂದ ಪಕ್ಕದ ಜಮೀನುಗಳಿಗೆ ಕೊಚ್ಚಿಕೊಂಡು ಹೋಗಿದ್ದು ರಸ್ತೆಯಲ್ಲಿ ಬಾರಿ ವಾಹನಗಳು ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಇದೇ ರಸ್ತೆಯಲ್ಲಿ ಶಾಲೆಗಳಿಗೆ ಹೋಗುವ ಮಕ್ಕಳ ಶಾಲಾ ವಾಹನಗಳು ಓಡಾಡಲಾಗುತ್ತಿಲ್ಲ ಎಂದು ನೆರ್ನಹಳ್ಳಿ ಗಡ್ಡೂರು ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ರೆಡ್ಡಿ ಹೇಳಿದರು.

ನಂಗಲಿಯಿಂದ ಕೆರಸಿಮಂಗಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆರೆ ಕಟ್ಟೆ ಕೆಳಗಿನ ರಸ್ತೆಯ ಡಾಂಬರು ಸಂಪೂರ್ಣವಾಗಿ ಕಿತ್ತು ಬಂದು ಕಲ್ಲುಗಳೇ ಮೇಲೆದ್ದಿರುವುದರಿಂದ ಸುತ್ತಮುತ್ತಲಿನ ಜನ ರಸ್ತೆಯಲ್ಲಿ ಸಂಚರಿಸುವುದನ್ನೇ ಬಿಟ್ಟು ಕೆರೆಯ ಕಟ್ಟೆಯ ಮೇಲೆ ಓಡಾಡುತ್ತಿದ್ದಾರೆ. ಕೇವಲ ಮೂರು ವರ್ಷಗಳ ಹಿಂದೆ ಕೆರೆ ಕಟ್ಟೆಯ ಕೆಳಗಿನ ರಸ್ತೆಗೆ ಅನುದಾನ ಕೊರತೆಯಿಂದ ಡಾಂಬರನ್ನು ಅರ್ಧಕ್ಕೆ ಮಾತ್ರ ಹಾಕಲಾಗಿತ್ತು. ಇನ್ನುಳಿದ ಅರ್ಧ ಭಾಗ ಮಣ್ಣಿನ ರಸ್ತೆಯಾಗಿಯೇ ಉಳಿದಿತ್ತು. ಆದರೆ ಸತತ ಮಳೆಗೆ ಡಾಂಬರೇ ಮಾಯವಾಗಿ ಮಣ್ಣಿನ ಹಾಗೂ ಕಲ್ಲುಗಳ ರಸ್ತೆಯಾಗಿ ಬದಲಾಗಿದೆ.

ಬೈಯಪ್ಪನಹಳ್ಳಿ, ಕೆರಸಿಮಂಗಲ, ಮರವೇಮನೆ ಹಾಗೂ ಮುದಿಗೆರೆ ಗ್ರಾಮಗಳ ಲೆಕ್ಕವಿಲ್ಲದಷ್ಟು ಜನ ವಾಹನ ಸವಾರರು ಬಿದ್ದು ರಸ್ತೆಯಲ್ಲಿಯೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದರು. ಆದರೂ ರಸ್ತೆಗೆ ಮೋಕ್ಷ ಸಿಕ್ಕಿಲ್ಲ ಎಂದು ಕೆರಸಿಮಂಗಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟರಮಣ ಆಕ್ರೋಶ ವ್ಯಕ್ತಪಡಿಸಿದರು.

ಅನುದಾನಕ್ಕೆ ಮನವಿ: ತಾಲ್ಲೂಕಿನಲ್ಲಿ ಈಚೆಗೆ ಬಿದ್ದ ಮಳೆಗೆ ಕೆಲವು ರಸ್ತೆಗಳು ನಾಶವಾಗಿರುವುದು ನಿಜ. ಇದರಲ್ಲಿ ಮಲ್ಲೆಕುಪ್ಪದಿಂದ ಗುಮ್ಮಕಲ್ಲು ಮಾರ್ಗದ ರಸ್ತೆಯ ದುರಸ್ತಿಗೆ ಎರಡು ಕೋಟಿ ಅನುದಾನ ಬೇಕೆಂದು ಸರ್ಕಾರಕ್ಕೆ ಬರೆಯಲಾಗಿದೆ. ನಂಗಲಿ ಕೆರೆ ಕಟ್ಟೆ ಕೆಳಗಿನ ಕೆರಸಿಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ₹40 ಲಕ್ಷ ಟೆಂಡರ್ ಕರೆಯಲಾಗಿದೆ.

-ಗೋಪಾಲ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT