ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ವೃದ್ಧಿಯಲ್ಲಿ ರೈತರು– ಕಾರ್ಮಿಕರ ಪಾತ್ರ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅಭಿಪ್ರಾಯ
Last Updated 22 ಜುಲೈ 2019, 19:34 IST
ಅಕ್ಷರ ಗಾತ್ರ

ಕೋಲಾರ: ‘ದೇಶದ ರೈತರು ಹಾಗೂ ಕಾರ್ಮಿಕರು ಜಿಡಿಪಿ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ’ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅಭಿಪ್ರಾಯಪಟ್ಟರು.

ಇಲ್ಲಿ ಸೋಮವಾರ ನಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪ್ರಮಾಣಪತ್ರ ಹಾಗೂ ಸಲಕರಣೆ ಪೆಟ್ಟಿಗೆ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಕಾರ್ಮಿಕರು ದೇಶದ ಜಿಡಿಪಿಯನ್ನು ಶೇ 11ರಷ್ಟು ವೃದ್ಧಿ ಮಾಡಿದ್ದಾರೆ’ ಎಂದರು.

‘ಜಿಡಿಪಿ ಏರಿಕೆಯಲ್ಲಿ ರೈತರು ಮೊದಲ ಸ್ಥಾನದಲ್ಲಿ ಹಾಗೂ ಕಾರ್ಮಿಕರು 2ನೇ ಸ್ಥಾನದಲ್ಲಿದ್ದಾರೆ. ಕಾರ್ಮಿಕರ ಕೊಡುಗೆ ಆಧಾರದ ಮೇಲೆ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದ್ದು, ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯ ಸುಮಾರು 80 ಸಾವಿರ ಮಂದಿ ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಶೇ 80ರಷ್ಟು ಮಂದಿ ನೈಜ ಕಾರ್ಮಿಕರೇ ಅಲ್ಲ. ಹೀಗಾಗಿ ಪ್ರಾಮಾಣಿಕ ಫಲಾನುಭವಿಗಳಿಗೆ ಮಾತ್ರ ಗುರುತಿನ ಚೀಟಿ ನೀಡಲು ಕ್ರಮ ಕೈಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಿಸಿ ನಕಲಿ ಗುರುತಿನ ಚೀಟಿಗಳನ್ನು ರದ್ದುಪಡಿಸುತ್ತೇವೆ’ ಎಂದು ವಿವರಿಸಿದರು.

‘ಅರ್ಹರಿಗೆ ಮಾತ್ರ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ನೀಡಬೇಕೆಂಬ ಕಾರಣ ಇಲಾಖೆಯಿಂದ ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಬೇರೆ ಬೇರೆ ಕೆಲಸ ಮಾಡಿಕೊಂಡು ಗುರುತಿನ ಚೀಟಿ ತೆಗೆದುಕೊಳ್ಳುವುದು ಕಾನೂನುಬಾಹಿರ. ಸಾಕಷ್ಟು ಮಂದಿ ಈಗಾಗಲೇ ಇಂತಹ ಗುರುತಿನ ಚೀಟಿ ವಾಪಸ್ ನೀಡಿದ್ದಾರೆ. ಪರಿಶೀಲನೆ ವೇಳೆ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯನ್ನು ಅರ್ಹರಲ್ಲದವರು ಪಡೆದಿರುವುದು ಕಂಡುಬಂದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

328 ಮಂದಿಗೆ ತರಬೇತಿ: ‘ಜಿಲ್ಲೆಯಲ್ಲಿ ಈಗಾಗಲೇ ಸುಮಾರು 328 ಮಂದಿಗೆ ವಿವಿಧ ರೀತಿಯ ತರಬೇತಿ ನೀಡಲಾಗಿದ್ದು, ಉದ್ಯೋಗಾವಕಾಶ ದೊರಕಿಸಲು ಪ್ರಮಾಣಪತ್ರ ವಿತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾಹಿತಿ ನೀಡಿದರು.

‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಹಾಗೂ ಇತರೆ ಯಾವುದೇ ಶಿಕ್ಷಣ ಪಡೆದವರು ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪ್ರಮಾಣಪತ್ರ ತೋರಿಸಿ ಉದ್ಯೋಗ ಪಡೆಯುತ್ತಿದ್ದಾರೆ. ಆದರೆ, ಕಾರ್ಮಿಕರಿಗೆ ತಮ್ಮ ಸಾಮರ್ಥ್ಯ ತೋರಿಸಲು ಯಾವುದೇ ರೀತಿಯ ಪತ್ರವಿಲ್ಲ. ಆದ ಕಾರಣ ಉನ್ನತ ಹಾಗೂ ಉತ್ತಮ ವಿಧಾನಗಳಲ್ಲಿ ಅಳವಡಿಸಿಕೊಳ್ಳುವ ತರಬೇತಿ ಪಡೆಯುವುದರಿಂದ ಉದ್ಯೋಗಾವಕಾಶ ಸಿಗಲಿದೆ’ ಎಂದರು.

ಸಹಾಯಧನ ನೀಡುತ್ತಿದೆ: ‘ಕಟ್ಟಡ ಕಾರ್ಮಿಕರು ಕೆಲಸ ಮಾಡುವಾಗ ತೊಂದರೆಗೆ ಒಳಗಾದರೆ ಅವರಿಗೆ ಸರ್ಕಾರವೇ ಚಿಕಿತ್ಸೆ ಕೊಡಿಸುವುದರ ಜತೆಗೆ ಸಹಾಯಧನ ನೀಡುತ್ತಿದೆ. ಈ ಎಲ್ಲಾ ಅನುಕೂಲಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅನರ್ಹರು ಗುರುತಿನ ಚೀಟಿ ಪಡೆದಿರುವ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ್ ಮಸಗುಪ್ಪಿ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಎನ್.ನಾರಾಯಣಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಜಿ.ಮುಕುಂದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT