ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಉಳಿವಿಗೆ ರೋಟರಿ ಸಂಸ್ಥೆ ಪಣ

ಜಿಲ್ಲೆಯ 125 ಶಾಲೆಗಳನ್ನು ಮಾದರಿಯಾಗಿ ಮಾಡಲು ಯೋಜನೆ
Last Updated 6 ಜುಲೈ 2018, 14:38 IST
ಅಕ್ಷರ ಗಾತ್ರ

ಕೋಲಾರ: ಬೆಂಗಳೂರು ರೋಟರಿ ಸಂಸ್ಥೆಯು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಯಂಚಿನ 125 ಶಾಲೆಗಳನ್ನು ಗುರುತಿಸಿ ಮಾದರಿ ಶಾಲೆಗಳಾಗಿ ಮಾಡಲು ಯೋಜನೆ ರೂಪಿಸಿದೆ.

ದಿನೇ ದಿನೇ ಮಕ್ಕಳ ದಾಖಲಾತಿ ಕುಸಿದು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವುದನ್ನು ಕಂಡು ರೋಟರಿ ಸಂಸ್ಥೆಯ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಸಾಕಷ್ಟು ಶ್ರಮ ವಹಿಸಿ ಅನೇಕ ಶಾಲೆಗಳನ್ನು ಮಾದರಿಯಾಗಿ ಮಾಡಿದೆ.

ರೋಟರಿ ಸಂಸ್ಥೆ ಸದಸ್ಯರು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿನ ಯಶಸ್ಸಿನಿಂದ ಪ್ರೇರಣೆ ಪಡೆದು ಕೋಲಾರ ಜಿಲ್ಲೆಯಲ್ಲೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದಾರೆ. ಜಿಲ್ಲೆಯ ಮಾಲೂರು, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಗಡಿ ಭಾಗದಲ್ಲಿರುವ ತೀರಾ ಹಿಂದುಳಿದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಮೂಲಸೌಕರ್ಯ ಕಲ್ಪಿಸಲು ಉದ್ದೇಶಿಸಿದ್ದಾರೆ.

ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಪೀಠೋಪಕರಣ, ಅಡುಗೆ ಮನೆ, ಗ್ರಂಥಾಲಯ, ಉಚಿತ ಪಠ್ಯಪುಸ್ತಕ ಮತ್ತು ನೋಟ್‌ ಪುಸ್ತಕ ಹಾಗೂ ಬೋಧನಾ ಸಾಮಗ್ರಿಗಳನ್ನು ಕಲ್ಪಿಸಿಕೊಟ್ಟು ಮಕ್ಕಳಿಗೆ ಮಾದರಿ ಶಿಕ್ಷಣ ನೀಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.

ಸಿಇಒ ಜತೆ ಚರ್ಚೆ: ಈ ನಿಟ್ಟಿನಲ್ಲಿ ಸಂಸ್ಥೆಯ ಗ್ರೀನ್ ಕ್ರೂಸೆಡರ್ ಆಗಿರುವ ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್‌ ಅವರು ನಗರದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್‌.ಲತಾಕುಮಾರಿ ಅವರನ್ನು ಭೇಟಿಯಾಗಿ ಮಾದರಿ ಶಾಲಾ ಯೋಜನೆಯ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.

‘ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆಯಿಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಇದರಿಂದ ಫಲಿತಾಂಶ ಕುಸಿದು, ವರ್ಷದಿಂದ ವರ್ಷಕ್ಕೆ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಮಕ್ಕಳು ಸರ್ಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅಮರನಾರಾಯಣ್‌ ಕಳವಳ ವ್ಯಕ್ತಪಡಿಸಿದರು.

‘ಗ್ರಾಮೀಣ ಭಾಗದ ಬಡ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಉಳಿಯಬೇಕಾದ ಅನಿವಾರ್ಯತೆ ಇದೆ. ನಾವೆಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಹುದ್ದೆ ಅಲಂಕರಿಸಿದ್ದೇವೆ. ಬಡ ಮಕ್ಕಳಿಗೆ ಆರ್ಥಿಕವಾಗಿ ಹೊರೆಯಾಗದಂತೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ’ ಎಂದು ವಿವರಿಸಿದರು.

ಪಟ್ಟಿ ಮಾಡಿ: ‘ಜಿಲ್ಲೆಯ ಗಡಿ ಭಾಗದಲ್ಲಿ 400 ಶಾಲೆಗಳನ್ನು ಪಟ್ಟಿ ಮಾಡಿ. ಆ ಶಾಲೆಗಳ ಪೈಕಿ ರೋಟರಿ ಸಂಸ್ಥೆಯವರು ಆದ್ಯತೆ ಮೇರೆಗೆ ಕೆಲವನ್ನು ಆಯ್ಕೆ ಮಾಡಿಕೊಂಡು ಮಾದರಿ ಶಾಲೆಗಳಾಗಿ ಮಾಡುತ್ತಾರೆ. ಸಂಸ್ಥೆಯವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ. ಅವರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಿಇಒ ಲತಾಕುಮಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಪ್ರಭಾರ) ವಿಕ್ಟರ್‌ ಅವರಿಗೆ ಸೂಚಿಸಿದರು.

‘ಶಾಲೆಗಳಲ್ಲಿನ ಮಕ್ಕಳ ಹಾಗೂ ಶಿಕ್ಷಕರ ಸಂಖ್ಯೆ, ಮೂಲಸೌಕರ್ಯ ಸಮಸ್ಯೆ, ಅಗತ್ಯವಿರುವ ಕೊಠಡಿಗಳು ಸೇರಿದಂತೆ ಶಾಲೆಯ ಸಂಪೂರ್ಣ ವಿವರವನ್ನು ಶೀಘ್ರವೇ ಸಂಗ್ರಹಿಸಬೇಕು’ ಎಂದು ಹೇಳಿದರು.

ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ಶ್ರೀನಿವಾಸರಾವ್, ಬೆಂಗಳೂರು ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಅಲೀಂ ಉಲ್ಲಾ ಖಾನ್, ಪ್ರಕಾಶ್ ಹೆಗಡೆ, ಜೋಸೆಫ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT