ಶುಕ್ರವಾರ, ಫೆಬ್ರವರಿ 21, 2020
20 °C
ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ

ಹಾಲು ಖರೀದಿ ದರ ₹1 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್‌) ಹಾಲು ಹಾಗೂ ಮೊಸರಿನ ಮಾರಾಟ ದರ ಹೆಚ್ಚಿಸಿದ ಬೆನ್ನಲ್ಲೇ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ಹಾಲು ಖರೀದಿ ದರವನ್ನು ಲೀಟರ್‌ಗೆ ₹1 ಹೆಚ್ಚಿಸಿದೆ.

ಪ್ರಸ್ತುತ ಹಾಲು ಖರೀದಿ ದರ ಪ್ರತಿ ಲೀಟರ್‌ಗೆ ₹25 ಇದೆ. ದರ ಹೆಚ್ಚಳದ ನಂತರ ಪರಿಷ್ಕೃತ ದರ ಲೀಟರ್‌ಗೆ ₹26ಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಪ್ರೋತ್ಸಾಹಧನವಾಗಿ ಸರ್ಕಾರ ಲೀಟರ್‌ಗೆ ₹5 ಕೊಡುತ್ತದೆ. ಫೆ.8ರಿಂದ ಹೊಸ ಖರೀದಿ ದರ ಜಾರಿಯಾಗಲಿದೆ.

ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,866 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, ಸುಮಾರು 2.87 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ. ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ಒಕ್ಕೂಟದಲ್ಲಿ ದಿನನಿತ್ಯ ಸುಮಾರು 8.41 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ.

ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳಾಗಿದ್ದು, ಕೃಷಿ ನಿರ್ವಹಣೆ ಕಷ್ಟವಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, 2 ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ರೈತರು ಕೃಷಿ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದು, ಹೈನುಗಾರಿಕೆಯು ರೈತ ಕುಟುಂಬಗಳ ಬೆನ್ನೆಲುಬಾಗಿದೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ.

ಬರಪೀಡಿತ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ರಾಸುಗಳನ್ನು ಸಾಕುವುದು ರೈತರಿಗೆ ದೊಡ್ಡ ಸವಾಲಾಗಿದೆ. ಸಂಕಷ್ಟದಲ್ಲಿರುವ ಹೈನೋದ್ಯಮಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಕೋಚಿಮುಲ್‌ ಆಡಳಿತ ಮಂಡಳಿಯು ಇಲ್ಲಿ ಮಂಗಳವಾರ ತುರ್ತು ಸಭೆ ನಡೆಸಿ ಹಾಲು ಖರೀದಿ ದರ ಹೆಚ್ಚಳದ ನಿರ್ಧಾರ ಕೈಗೊಂಡಿತು.

ಕೆಎಂಎಫ್‌ ಸೂಚನೆ

ಕೆಎಂಎಫ್ ಫೆ.1ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಹಾಗೂ ಮೊಸರಿನ ಮಾರಾಟ ದರವನ್ನು ಲೀಟರ್‌ಗೆ ₹2 ಹೆಚ್ಚಳ ಮಾಡಿತ್ತು. ಹೆಚ್ಚಳವಾದ ದರದಲ್ಲಿ ₹1ನ್ನು ನೇರವಾಗಿ ಹಾಲು ಉತ್ಪಾದಕರಿಗೆ, 40 ಪೈಸೆಯನ್ನು ರಾಸುಗಳ ವಿಮೆಗೆ, ಹಾಲು ಮಾರಾಟ ಮಾಡುವವರಿಗೆ ಕಮಿಷನ್‌ ರೂಪದಲ್ಲಿ 40 ಪೈಸೆ ಹಾಗೂ ಹಾಲು ಸಹಕಾರ ಸಂಘಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರೋತ್ಸಾಹಧನವಾಗಿ 20 ಪೈಸೆ ನೀಡುವುದಾಗಿ ಕೆಎಂಎಫ್‌ ಹೇಳಿತ್ತು.

ಕೆಎಂಎಫ್‌ ಸೂಚನೆಯಂತೆ ಕೋಚಿಮುಲ್‌ ಆಡಳಿತ ಮಂಡಳಿಯು ಹಾಲು ಖರೀದಿ ದರ ಹೆಚ್ಚಿಸಿ ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)