ಶನಿವಾರ, ಸೆಪ್ಟೆಂಬರ್ 25, 2021
29 °C
ಕಸ ಸಂಗ್ರಹಣೆ–ವಿಲೇವಾರಿಗೆ ಪರಿಣಾಮಕಾರಿ ಕ್ರಮ: ಜಿ.ಪಂ ಸಿಇಒ ನಾಗರಾಜ್‌ ಹೇಳಿಕೆ 

ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶ ತ್ಯಾಜ್ಯ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಪರಿಣಾಮಕಾರಿ ಕ್ರಮ ಕೈಗೊಂಡಿರುವ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ 5 ಜಿಲ್ಲೆಗಳು ತ್ಯಾಜ್ಯ ಮುಕ್ತ ಜಿಲ್ಲೆಗಳೆಂದು (ಒಡಿಎಫ್‌ ಪ್ಲಸ್‌ 1) ಘೋಷಣೆಯಾಗಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ 156 ಗ್ರಾಮ ಪಂಚಾಯಿತಿಗಳಿವೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎಲ್ಲಾ ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಸಂಜೀವಿನಿ ಯೋಜನೆಯಡಿ ರಚನೆಯಾಗಿರುವ 25 ಗ್ರಾ.ಪಂ ಮಟ್ಟದ ಒಕ್ಕೂಟಗಳೊಂದಿಗೆ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಒಕ್ಕೂಟಗಳ ಸದಸ್ಯರು ತರಬೇತಿ ಪಡೆದು ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಸದ ಸಮಸ್ಯೆಗೆ ಮುಕ್ತಿ ದೊರೆತಿದೆ’ ಎಂದು ಮಾಹಿತಿ ನೀಡಿದರು.

‘156 ಗ್ರಾ.ಪಂಗಳಿಗೂ ಕಸ ನಿರ್ವಹಣೆಗೆ ಜಮೀನು ಮಂಜೂರಾಗಿದೆ. ಜಮೀನುಗಳಲ್ಲಿ ಸ್ವಚ್ಛ ಸಂಕೀರ್ಣಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಗ್ರಾಮಗಳಲ್ಲಿ ಕಸವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಮರು ಬಳಕೆಗೆ ಯೋಗ್ಯವಾಗಿಸಲಾಗುತ್ತಿದೆ. ಇದರಿಂದ ಗ್ರಾ.ಪಂಗಳಿಗೆ ಆದಾಯ ಬರುತ್ತಿದೆ. ಗ್ರಾಮಗಳು ಸ್ವಚ್ಛತೆ ಕಾಪಾಡಲು ಅನುಕೂಲವಾಗಲಿದೆ’ ಎಂದು ವಿವರಿಸಿದರು.

‘31 ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದ್ದು, ಈಗಾಗಲೇ 16 ಸಂಕೀರ್ಣ ಪೂರ್ಣಗೊಂಡಿವೆ. ಕೆಲವೆಡೆ ಜಾಗ ಮತ್ತು ಅನುದಾನದ ಸಮಸ್ಯೆಯಿಂದ ಕಾಮಗಾರಿ ತಡವಾಗಿದೆ. ನರೇಗಾ ಯೋಜನೆಯಡಿ 125 ಕಡೆ ಕಾಮಗಾರಿ ಆರಂಭಿಸಬೇಕಿದೆ. 20ಕ್ಕೂ ಹೆಚ್ಚು ಸಂಕೀರ್ಣಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಸೆಪ್ಟೆಂಬರ್ ಅಂತ್ಯದೊಳಗೆ 50ಕ್ಕೂ ಹೆಚ್ಚು ಸ್ವಚ್ಛ ಸಂಕೀರ್ಣ ನಿರ್ಮಾಣವಾಗಲಿವೆ. ಸದ್ಯ ಹಳೆಯ ಕಟ್ಟಡಗಳಲ್ಲಿ ಕಸ ಸಂಗ್ರಹಣೆ ಮಾಡುತ್ತಿದ್ದು, ಸ್ವಚ್ಛ ಸಂಕೀರ್ಣಕ್ಕೆ ಸ್ಥಳಾಂತರ ಮಾಡುತ್ತೇವೆ’ ಎಂದರು.

ಕಸ ಪ್ರತ್ಯೇಕಿಸಿ: ‘ಜನರು ರಸ್ತೆ ಬದಿಯಲ್ಲಿ ಅಥವಾ ಖಾಲಿ ನಿವೇಶನಗಳಲ್ಲಿ ಕಸ ಎಸೆಯಬಾರದು. ಬದಲಿಗೆ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮನೆಯಲ್ಲೇ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಬೇಕು. ಗ್ರಾ.ಪಂಗಳ ಕಸ ಸಂಗ್ರಹಣೆ ವಾಹನಗಳಿಗೆ ಒಣ ಕಸ ಮಾತ್ರ ನೀಡಬೇಕು. ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಕೈತೋಟಗಳಿಗೆ ಬಳಸಬೇಕು’ ಎಂದು ಸಲಹೆ ನೀಡಿದರು.

‘ಹಳ್ಳಿಗಳಲ್ಲಿ ಮುಂದೆ ಹಸಿ ಮತ್ತು ದ್ರವ ರೂಪದ ಕಸ ಸಂಗ್ರಹಣೆಗೆ ಕ್ರಮ ಕೈಗೊಳ್ಳುತ್ತೇವೆ. ದ್ರವ ರೂಪದ ತ್ಯಾಜ್ಯ ಸಂಗ್ರಹಣೆಗೆ ಪ್ರಾಯೋಗಿಕವಾಗಿ ಇಂಗು ಗುಂಡಿ ನಿರ್ಮಿಸಿ ನೈರ್ಮಲ್ಯ ಕಾಪಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

ಡಿಜಿಟಲ್ ಗ್ರಂಥಾಲಯ: ‘ಗ್ರಾಮೀಣ ಭಾಗದಲ್ಲಿ ಶಾಲೆ ಮತ್ತು ಅಂಗನವಾಡಿಗಳ ಜತೆಗೆ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್‌ ಸೂಚಿಸಿದ್ದಾರೆ. ಗ್ರಾಮೀಣ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತಿಸುತ್ತೇವೆ’ ಎಂದು ತಿಳಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗೆ ಕೊನೆಯಿಲ್ಲ. ಒಂದು ಸಮಸ್ಯೆ ಪರಿಹರಿಸಿದರೆ ಮತ್ತೊಂದು ಸೃಷ್ಟಿಯಾಗುತ್ತದೆ. ವಿದ್ಯುತ್, ಶೌಚಾಲಯ, ಫ್ಯಾನ್ ಸೇರಿದಂತೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಲು 200 ಶಾಲೆ ಗುರುತಿಸಲಾಗಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಮನೆಯ ವಾತಾವರಣ ನಿರ್ಮಿಸುತ್ತೇವೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು