ಶುಕ್ರವಾರ, ಡಿಸೆಂಬರ್ 4, 2020
24 °C

‌ಕೆಜಿಎಫ್‌: ಹುತಾತ್ಮ ಕಾರ್ಮಿಕರಿಗೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಕೆಜಿಎಫ್‌: ಚಿನ್ನದ ಗಣಿಯ ಕಾರ್ಮಿಕರ ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಗೋಲಿಬಾರ್‌ಗೆ ಮಡಿದ ಆರು ಮಂದಿ ಹುತಾತ್ಮ ಕಾರ್ಮಿಕರಿಗೆ ನಗರದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಿಪಿಎಂ ಕಾರ್ಯಕರ್ತರು ಆಂಡರಸನ್‌ಪೇಟೆಯ ವಾಸನ್‌ ವೃತ್ತದಿಂದ ರಾಜೇಶ್ ‌ಕ್ಯಾಂಪ್‌ವರೆವಿಗೂ ಮೆರವಣಿಗೆಯಲ್ಲಿ ತೆರಳಿ, ಹುತಾತ್ಮ ಕಾರ್ಮಿಕರ ಸಮಾಧಿಗಳಿಗೆ ಗೌರವ ನಮನ ಸಲ್ಲಿಸಿದರು.

ಕಾರ್ಮಿಕ ಮುಖಂಡರಾದ ಪಿ. ತಂಗರಾಜ್‌, ಪಿ. ಆನಂದರಾಜ್‌, ಟಿ. ಶ್ರೀನಿವಾಸನ್‌, ಎ.ಆರ್‌ .ಬಾಬು, ಆರ್. ಜಯರಾಮನ್‌, ಕೆ. ಗೋವಿಂದರಾಜ್‌, ವಿ. ತಿರುಪತಿ ಹಾಜರಿದ್ದರು.‌

ಘಟನೆಯ ವಿವರ: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ 1946ರಲ್ಲಿ ಚಿನ್ನದ ಗಣಿ (ಈಗಿನ ಬಿಜಿಎಂಎಲ್‌) ಕಾರ್ಮಿಕರು ಮುಷ್ಕರ ನಡೆಸಿದ್ದರು. ರಾಜ್ಯದಲ್ಲಿ ಮೊದಲ ಟ್ರೇಡ್‌ ಯೂನಿಯನ್ ಎಂದು ಗುರುತಿಸಿಕೊಂಡ ನಂತರ ಮುಖಂಡರಾದ ಕೆ.ಎಸ್‌. ವಾಸನ್‌ ಮತ್ತು ವಿ.ಎಂ. ಗೋವಿಂದನ್‌ ನೇತೃತ್ವದಲ್ಲಿ ಕಾರ್ಮಿಕರು ಚಳವಳಿ ನಡೆಸಿದರು. ಆಡಳಿತ ವರ್ಗ ಚಳವಳಿಗೆ ಸೊಪ್ಪು ಹಾಕಲಿಲ್ಲ. 78 ದಿನಗಳ ಕಾಲ ಪ್ರತಿಭಟನೆ ಮುಂದುವರಿಯಿತು. ಸಾವಿರಾರು ಕಾರ್ಮಿಕರು ಪ್ರತಿನಿತ್ಯ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದರು. ನಂತರ ಮಣಿದ ಆಡಳಿತ ವರ್ಗ ಕಾರ್ಮಿಕರು ಮಂಡಿಸಿದ 26 ಬೇಡಿಕೆಗಳ ಪೈಕಿ 18 ಬೇಡಿಕೆಗಳನ್ನು ಒಪ್ಪಿಕೊಂಡಿತು.

ಹೋರಾಟದ ಯಶಸ್ಸನ್ನು ಕಂಡ ಬ್ರಿಟಿಷರು ಕಾರ್ಮಿಕ ಸಂಘವನ್ನು ಒಡೆಯಲು ಪ್ರಯತ್ನಿಸಿದರು. ಮುಖಂಡ ವಾಸನ್‌ ಹತ್ಯೆಗೆ ಯತ್ನಿಸಲಾಯಿತು. ಅವರಿಗೆ ಚಾಕು ಹಾಕಲಾಯಿತು. ಅವರು ಅಪಾಯದಿಂದ ಪಾರಾದರು. ಜನರು ಈ ಸಂಚಿನಿಂದ ಉದ್ರಿಕ್ತಗೊಂಡರು. ಮಲೆಯಾಳಿ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಸೇರಿ ಹೋರಾಟ ನಡೆಸಿದರು. ಈ ಹೋರಾಟ ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದಾಗ ಆರು ಮಂದಿ ಹುತಾತ್ಮರಾದರು. ಅಂದಿನಿಂದಲೂ ನ.‌ 4ರಂದು ಹುತಾತ್ಮ ದಿನವನ್ನಾಗಿ ಕಾರ್ಮಿಕ ಸಂಘಟನೆಗಳು ಆಚರಿಸಿಕೊಂಡು ಬರುತ್ತಿವೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.