ಕೋಲಾರ: ‘ಜಿಲ್ಲೆಯಲ್ಲಿ ಹಾಗೂ ಪ್ರಮುಖವಾಗಿ ಮುಳಬಾಗಿಲು ಕ್ಷೇತ್ರದಲ್ಲಿ ಮರಳು ಮಾಫಿಯಾ ತಡೆಯುವವರೆಗೆ ಹೋರಾಟ ನಡೆಸುತ್ತೇನೆ’ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಬರುತ್ತದೆ. ಈ ವಿಚಾರದಲ್ಲಿ ಹಿಂದೆ ಇಲ್ಲಿದ್ದ ಗಣಿ ಅಧಿಕಾರಿ ಷಣ್ಮುಗಂ ಜೊತೆ ಗಲಾಟೆ ಕೂಡ ನಡೆದಿತ್ತು. ಇದೀಗ ಅವರ ವರ್ಗಾವಣೆಯಾಗಿದೆ. ಗಣಿ ಹಾಗೂ ಭೂವಿಜ್ಞಾನ ಸಚಿವರಿಗೆ ಪತ್ರ ಬರೆದು ಮರಳು ಮಾಫಿಯಾ ವಿರುದ್ಧ ಮಾಹಿತಿ ನೀಡಿದ್ದೇನೆ’ ಎಂದರು.
‘ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ನಡೆಯಲೇಬೇಕು. ಬೇರೆ ಕಡೆ ಟೊಮೆಟೊ ಚೆನ್ನಾಗಿದೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಏಕೆ ರೋಗ ಬರುತ್ತಿದೆ. ಫಸಲು ತೀರಾ ಕಡಿಮೆ ಆಗಿದೆ. ಯಾವುದೇ ಬೆಳೆ ಬೆಳೆದರೂ ರೋಗ ಬರುತ್ತಿದೆ. ಆದರೆ, ಅಧಿಕಾರಿಗಳು ಮಾಹಿತಿ ಮುಚ್ಚಿಡುತ್ತಿದ್ದಾರೆ. ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸುತ್ತೇನೆ’ ಎಂದು ಹೇಳಿದರು.
‘ಸಭೆಯಲ್ಲಿ ಮಾತನಾಡಿದರೆ ರಾಜಕೀಯ ಎನ್ನುತ್ತಾರೆ. ಆದರೆ, ಕೆ.ಸಿ.ವ್ಯಾಲಿ ನೀರಿನಿಂದ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿವೆ. ರಾಜಕಾರಣಿಗಳು ತಮ್ಮ ತೆವಲು ತೀರಿಸಿಕೊಳ್ಳಲು ಪ್ರಯತ್ನಿಸಬಾರದು. ಮೂರನೇ ಹಂತದ ಶುದ್ಧೀಕರಣ ನಡೆಯಲೇಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.