ಭಾನುವಾರ, ಸೆಪ್ಟೆಂಬರ್ 19, 2021
29 °C

ಮುನಿಯಪ್ಪ ಜಿಲ್ಲೆಗೆ ಅಂಟಿರುವ ಶನಿ: ಚಂಗೋಲಿ ನಾರಾಯಣಸ್ವಾಮಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪರನ್ನು ಸೋಲಿಸದಿದ್ದರೆ ಜಿಲ್ಲೆಗೆ ಉಳಿಗಾಲವಿಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ಚಂಗೋಲಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಗುರುಗಳನ್ನೇ ಮುನಿಯಪ್ಪ ಮುಗಿಸಿದ್ದಾರೆ. ಜಿಲ್ಲೆಗೆ ಅಂಟಿಕೊಂಡಿರುವ ಈ ಶನಿಯ ನಿರ್ಮೂಲನೆಗೆ ಜನ ಸಂಕಲ್ಪ ಮಾಡಬೇಕು’ ಎಂದು ಕೋರಿದರು.

‘ಶನಿ ಮಹಾತ್ಮನಂತೆ ಇರುವ ಸಂಸದ ಮುನಿಯಪ್ಪ ರಾಜಕೀಯವಾಗಿ ಅನೇಕರನ್ನು ತುಳಿದಿದ್ದಾರೆ. ಒಂದು ವೇಳೆ ಅವರು ಯಾರನ್ನೂ ಸರ್ವನಾಶ ಮಾಡಿರದಿದ್ದರೆ ಸಾಯಿ ಬಾಬಾ ಮೇಲೆ ಪ್ರಮಾಣ ಮಾಡಿ ಹೇಳಲಿ’ ಎಂದು ಸವಾಲು ಹಾಕಿದರು.

‘ತನ್ನನ್ನು ಬೆಳೆಸಿದ ಹಿರಿಯ ನಾಯಕರು ಹಾಗೂ ತಾನೇ ಬೆಳೆಸಿದ ಕಿರಿಯರನ್ನೂ ಹೀನಾಯವಾಗಿ ತುಳಿದು ಹಾಕಿದ ಕೀರ್ತಿ ಮುನಿಯಪ್ಪ ಅವರಿಗೆ ಸಲ್ಲುತ್ತದೆ. ಇಷ್ಟಾದರೂ ತಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುತ್ತಿರುವ ಅವರಿಗೆ ಮಾನ ಮರ್ಯಾದೆ ಇಲ್ಲ. ಅವರು ಕ್ಷೇತ್ರಕ್ಕೆ ಶನಿಯೇ ಹೊರತು ಜನ ನಾಯಕರಲ್ಲ’ ಎಂದು ವ್ಯಂಗ್ಯವಾಡಿದರು.

‘ವಿಧಾನ ಪರಿಷತ್‌ ಸದಸ್ಯ ನಜೀರ್ ಅಹಮ್ಮದ್‌ 7 ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಸಿದ್ಧ ಉಡುಪು ಕಾರ್ಖಾನೆ ಆರಂಭಿಸಿದರು. ಆದರೆ, ಮುನಿಯಪ್ಪ ರಾಜಕೀಯ ದ್ವೇಷಕ್ಕೆ ಸಿದ್ಧ ಉಡುಪು ಕಾರ್ಖಾನೆಗೆ ಅಡ್ಡಗಾಲು ಹಾಕಿದರು. ಇದರಿಂದ 7 ಸಾವಿರ ಕುಟುಂಬಗಳ ಬೀದಿ ಪಾಲಾದವು’ ಎಂದು ಆರೋಪಿಸಿದರು.

ಬಿಜೆಪಿಗೆ ಬೆಂಬಲ: ‘ಮುನಿಯಪ್ಪ ಶ್ರೀನಿವಾಸಪುರ ಬಳಿ ರೈಲ್ವೆ ಕೋಚ್ ಕಾರ್ಖಾನೆಗೆ ಹಿಂದಿನ ಲೋಕಸಭಾ ಚುನಾವಣೆ ವೇಳೆ ಶಂಕುಸ್ಥಾಪನೆ ಮಾಡಿದ್ದನ್ನು ಬಿಟ್ಟರೆ ಬೇರೆ ಯಾವುದೇ ಸಾಧನೆ ಮಾಡಿಲ್ಲ. ನಾವು ಕಾಂಗ್ರೆಸ್‌ ಪಕ್ಷದವರಾದರೂ ಮುನಿಯಪ್ಪರ ನೀಚ ರಾಜಕಾರಣದಿಂದ ಬೇಸತ್ತು ಬಿಜೆಪಿಗೆ ಬೇಷರತ್ ಬೆಂಬಲ ನೀಡುತ್ತದ್ದೇವೆ’ ಎಂದು ಘೋಷಿಸಿದರು.

ಪಾಪಸ್ ಕಳ್ಳಿ: ‘ಮುನಿಯಪ್ಪ ಪಾಪಸ್ ಕಳ್ಳಿ ಗಿಡದಂತೆ. ತಾನು ಮಾತ್ರ ಚೆನ್ನಾಗಿರಬೇಕು, ಉಳಿದವರು ಏನಾದರೂ ಆಗಲಿ ಎಂಬ ಮನೋಭಾವ ಹೊಂದಿದ್ದಾರೆ. ಅವರೇ ಬೆಳೆಸಿದ ಅನಿಲ್‌ಕುಮಾರ್, ಕೊತ್ತೂರು ಮಂಜುನಾಥ್, ಶ್ರೀನಿವಾಸ್, ಬಿಸೇಗೌಡ ಸೇರಿದಂತೆ ಅನೇಕರನ್ನು ಮೂಲೆಗುಂಪು ಮಾಡಿದ್ದಾರೆ. ಬಿಜೆಪಿಯ ಸಂಪಂಗಿ, ಕೃಷ್ಣಯ್ಯಶೆಟ್ಟಿ ಸೇರಿದಂತೆ ಅನೇಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಮಾಡಿದ ಮುನಿಯಪ್ಪರ ಬಂಡವಾಳ ಎಲ್ಲರಿಗೂ ಗೊತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ವಿ.ಹರೀಶ್ ಹರಿಹಾಯ್ದರು.

ಅಂಬೇಡ್ಕರ್ ಚಲವಾದಿ ಯುವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಘು, ಕಾರ್ಯದರ್ಶಿ ಎಂ.ರವಿ, ಶ್ರೀರಾಮ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು