ಕೋಲಾರ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕೋಲಾರದಲ್ಲಿ ಏ.5ರಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಸತ್ಯಮೇವ ಜಯತೇ’ ಹೆಸರಿನ ಸಮಾವೇಶವನ್ನು ಏ.9ಕ್ಕೆ ಮುಂದೂಡಲಾಗಿದೆ.
‘ರಾಹುಲ್ ಗಾಂಧಿ ಕಾರ್ಯಕ್ರಮವನ್ನು 9ಕ್ಕೆ ನಿಗದಿಪಡಿಸಲಾಗಿದೆ. ಇನ್ನುಳಿದ ವಿಚಾರಗಳ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡಲಿದ್ದೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ನಡೆದ ಸಭೆಯಲ್ಲಿ ನೀಡಿದ್ದ ಹೇಳಿಕೆಯೊಂದರಿಂದ ರಾಹುಲ್ ಈಗ ಎರಡು ವರ್ಷ ಶಿಕ್ಷೆಗೆ ಗುರಿಯಾಗಿದ್ದು, ಸಂಸತ್ ಸದಸ್ಯ ಸ್ಥಾನದಿಂದ ಅನರ್ಹರಾಗಿದ್ದಾರೆ. ಹೀಗಾಗಿ, ಇಲ್ಲಿಂದಲೇ ಸಂವಿಧಾನ ರಕ್ಷಣೆ ಹೋರಾಟ ಆರಂಭಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
‘ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಎಂಬ ಅನುಮಾನ ಉಂಟಾಗುತ್ತಿದೆ. ರಾಮರಾಜ್ಯ ಮಾಡುವುದಾಗಿ ಹೇಳಿದ್ದ ಪ್ರಧಾನಿ ಈಗ ರಾವಣ ರಾಜ್ಯ ಮಾಡಿದ್ದಾರೆ. ಸ್ವರ್ಗ ತೋರಿಸುವುದಾಗಿ ಹೇಳಿ ನರಕ ತೋರಿಸುತ್ತಿದ್ದಾರೆ’ ಎಂದು ಸಲೀಂ ವಾಗ್ದಾಳಿ ನಡೆಸಿದರು.
‘ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೇಲೆ ಬಿಜೆಪಿಯವರು ಟೀಕೆ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಮುಖಂಡರು ಯಾವತ್ತೂ ದೂರು ನೀಡಿಲ್ಲ’ ಎಂದರು.
‘ರಾಹುಲ್ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ. ಎಲ್ಲಿ ಹೋರಾಟ ಆರಂಭವಾಯಿತೋ ಅಲ್ಲಿಂದ ಮತ್ತೆ ಹೋರಾಟ ಆರಂಭಿಸಲು ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.