ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿತಾ ಮಹರ್ಷಿ ತತ್ವಾದರ್ಶ ಬದುಕಿಗೆ ದಾರಿದೀಪ: ಜಿಲ್ಲಾಧಿಕಾರಿ ಸ್ನೇಹಾ ಬಣ್ಣನೆ

Last Updated 19 ಫೆಬ್ರುವರಿ 2021, 15:02 IST
ಅಕ್ಷರ ಗಾತ್ರ

ಕೋಲಾರ: ‘ಸವಿತಾ ಸಮಾಜ ಶುಭ ಕಾರ್ಯಗಳಿಗೆ ಮುಂದಿರುತ್ತದೆ. ಈ ಸಮುದಾಯ ಇಲ್ಲದಿದ್ದರೆ ಮನುಷ್ಯ ಸಮುದಾಯವೇ ವಿಕಾರವಾಗಿರುತ್ತಿತ್ತು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ನಡೆದ ಸವಿತಾ ಮಹರ್ಷಿ ಮತ್ತು ಛತ್ರಪತಿ ಶಿವಾಜಿ ಜಯಂತಿಯಲ್ಲಿ ಮಾತನಾಡಿ, ‘ಯಾವುದೇ ಶುಭ ಸಮಾರಂಭಕ್ಕೆ ಸವಿತಾ ಸಮಾಜದವರ ಅಗತ್ಯವಿದೆ. ಈ ಸಮುದಾಯದವರನ್ನು ಶೋಷಿತರಾಗಿ ಕಾಣುವುದು ಸರಿಯಲ್ಲ. ಸಮಾಜದ ಸವಿತಾ ಮಹರ್ಷಿಯ ತತ್ವಾದರ್ಶ ಬದುಕಿಗೆ ದಾರಿದೀಪ’ ಎಂದು ಕಿವಿಮಾತು ಹೇಳಿದರು.

‘ಸವಿತಾ ಸಮಾಜದವರು ಸಮಾಜದಲ್ಲಿ ಹಿಂದಿನಿಂದಲೂ ಸ್ಥಾನಮಾನ ಪಡೆದುಕೊಂಡಿದ್ದಾರೆ. ಈ ಸಮುದಾಯವರು ಕುಲ ಕುಸುಬನ್ನೇ ನಂಬಿ ಜೀವನ ರೂಪಿಸಿಕೊಳ್ಳುವುದು ಕಷ್ಟ. ಕುಲ ವೃತ್ತಿಯ ಜತೆಗೆ ಬೇರೆ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಪೋಷಕರು ಮಕ್ಕಳನ್ನು ಸುಶಿಕ್ಷಿತರಾಗಿ ಮಾಡಿದರೆ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಸಲಹೆ ನೀಡಿದರು.

‘ದಲಿತರು, ಮುಸ್ಲಿಮರು ಹಾಗೂ ಬುಡಕಟ್ಟು ಜನಾಂಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಛತ್ರಪತಿ ಶಿವಾಜಿ ಧರ್ಮ ಸಹಿಷ್ಣುವಾಗಿದ್ದರು. ರಾಮದಾಸರು, ತುಕಾರಾಂ ಮತ್ತು ಏಕನಾಥ ಅವರಂತಹ ಸಂತರಿಂದ ಪ್ರೇರೇಪಿತರಾಗಿದ್ದ ಅವರ ಬಾಂಧವ್ಯ ರಾಜ್ಯಕ್ಕೂ ಪಸರಿಸಿತ್ತು. ಶಿವಾಜಿ ಹಿಂದೂ ಸಾಮ್ರಾಜ್ಯ ಸ್ಥಾಪಕ ಮಾತ್ರವಲ್ಲ, ಜಾತ್ಯಾತೀತ ಪರಿಕಲ್ಪನೆ ಹೊಂದಿದ್ದ ಮಹಾನ್ ವ್ಯಕ್ತಿ’ ಎಂದು ಬಣ್ಣಿಸಿದರು.

‘ಧೈರ್ಯಶಾಲಿ ಸಾಮ್ರಾಟರಾಗಿದ್ದ ಶಿವಾಜಿ ದೇಶ ರಕ್ಷಣೆ, ಸಂಸ್ಕೃತಿ ಪರ ಹೋರಾಟಗಾರರು. ಸಣ್ಣ ಸಮುದಾಯಗಳಿಂದ ಬಲಿಷ್ಠ ಸಮುದಾಯ ಕಟ್ಟುವ ಕೆಲಸ ಮಾಡುತ್ತಿದ್ದ ಅವರು ಉತ್ತಮ ಸಂಘಟನಾಕಾರರಾಗಿದ್ದರು. ಹಿಂದೂ ಸಾಮ್ರಾಜ್ಯ ಸ್ಥಾಪಿಸುವ ಕನಸು ಅವರದಾಗಿತ್ತು’ ಎಂದು ತಿಳಿಸಿದರು.

ಮೂಲ ಪುರುಷ: ‘ಸವಿತಾ ಮಹಿರ್ಷಿಯು ದೇವತೆಗಳಿಗೆಲ್ಲಾ ಸೇವೆ ಮಾಡುತ್ತಿದ್ದರು. ಸವಿತಾ ಸಮುದಾಯದ ಮೂಲ ಪುರುಷ ಸವಿತಾ ಮಹರ್ಷಿಯನ್ನು ಶಿವನ ಸೇವೆಗಾಗಿ ಸೃಷ್ಟಿ ಮಾಡಿದರೆಂಬ ಪ್ರತೀತಿ ಇದೆ. ಆದ್ದರಿಂದಲೇ ಈ ಸಮುದಾಯ ಮೃದಂಗ ಸೇರಿದಂತೆ ಹಲವು ವಾದ್ಯ ನುಡಿಸಲು ಪ್ರಮುಖ ಕಾರಣ’ ಎಂದು ಜಿಲ್ಲಾ ಪದವಿ ಪೂರ್ವ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜೆ.ನಾಗರಾಜ್ ವಿವರಿಸಿದರು.

‘ಸವಿತಾ ಎಂಬ ಪದ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಸಮಾಜದವರು ಪಾರಂಪರಿಕವಾಗಿ ಕ್ಷೌರಿಕ ವೃತ್ತಿ ನಂಬಿಕೊಂಡು ಬಂದಿದ್ದಾರೆ. ದೇವರುಗಳಿಗೂ ಸೇವೆ ಮಾಡಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಡಿಮೆ ಜನಸಂಖ್ಯೆ ಹೊಂದಿರುವ ಈ ಸಮಾಜದವರು ಸಂಘಟಿತರಾಗಬೇಕು’ ಎಂದು ಹೇಳಿದರು.

‘ಶಿವಾಜಿಯು ಭಾರತದಲ್ಲಿ ಭೂಸುಧಾರಣೆ ಜಾರಿಗೆ ತಂದ ಮೊದಲಿಗರು. ಅವರು ಸಣ್ಣ ಸಮುದಾಯಗಳಲ್ಲಿ ನಾಯಕತ್ವ ಬೆಳೆಸಿದರು. ಶಿವಾಜಿಯ ಹಿಂದುತ್ವ, ಸ್ವರಾಜ್ಯ, ಸರ್ವಧರ್ಮ ಸಮಭಾವದ ಪ್ರತೀಕವಾಗಿದ್ದರು. ‘ಭಕ್ತಿ ಪಂಥ ಮತ್ತು ಕಾಯಕ ಪಂಥ ಚಳವಳಿಯಿಂದ ಪ್ರಭಾವಿತರಾದ ಶಿವಾಜಿ ಜೀವನದ ಕಟ್ಟಕಡೆಯವರೆಗೂ ಎಲ್ಲಾ ಜಾತಿ, ಧರ್ಮದವರನ್ನು ಗೌರವಿಸಿದರು’ ಎಂದು ಸ್ಮರಿಸಿದರು.

ಸಂಘಟನೆ ಕೊರತೆ: ‘ಹಿಂದುಳಿದ ವರ್ಗಗಳಿಂದಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಬದಲಾವಣೆ ಕಾಣಲು ಸಾಧ್ಯವಾಗುತ್ತಿದೆ. ಸವಿತಾ ಸಮುದಾಯದವರು ರಾಜಕೀಯ ಶಕ್ತಿ ಪಡೆದುಕೊಳ್ಳಲು ಸಂಘಟಿತರಾಗಬೇಕು. ಆದರೆ, ಸಂಘಟನೆ ಕೊರತೆಯಿಂದ ಸವಿತಾ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಸವಿತಾ ಸಮಾಜ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಮರಿಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಶಾಸಕಿ ಎಂ.ರೂಪಕಲಾ, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಕ್ಷತ್ರಿಯ ಮರಾಠ ಪರಿಷತ್‌ ತಾಲ್ಲೂಕು ಅಧ್ಯಕ್ಷೆ ಶಾಂತಾಬಾಯಿ, ಸವಿತಾ ಸಮಾಜದ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT