ಶನಿವಾರ, ಜನವರಿ 29, 2022
23 °C
ಬೆಂಗಳೂರು ಉತ್ತರ ವಿ.ವಿ ಉಪನ್ಯಾಸಕಿ ನಾಗಮಣಿ ಬಣ್ಣನೆ

ಕೋಲಾರ: ಸಾವಿತ್ರಿಬಾಯಿ ಫುಲೆ ಅಕ್ಷರ ಬಿತ್ತಿದ ಅಕ್ಷರದವ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಾವಿತ್ರಿಬಾಯಿ ಫುಲೆ ಅವರು ಅವಮಾನಪಟ್ಟರೂ ದೇಶದ ಮಹಿಳೆಯರಿಗೆ ಮತ್ತು ನೊಂದ ಮನಸ್ಸುಗಳಿಗೆ ಅಕ್ಷರ ಬಿತ್ತಿ ಅಕ್ಷರದವ್ವ ಆಗಿದ್ದಾರೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ನಾಗಮಣಿ ಬಣ್ಣಿಸಿದರು.

ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು, ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಜೀವನದುದ್ದಕ್ಕೂ ಶೋಷಿತರು ಹಾಗೂ ಹಿಂದುಳಿದವರ ಪರವಾಗಿ ದುಡಿದ ಸಾವಿತ್ರಿಬಾಯಿ ಫುಲೆ ಅವರನ್ನು ಎಂದಿಗೂ ಮರೆಯಬಾರದು’ ಎಂದರು.

‘ಮದುವೆ ಸಮಾರಂಭವೊಂದರಲ್ಲಿ ತಮಗಾದ ಅವಮಾನದಿಂದ ಹಾಗೂ ಶೋಷಿತ ಸಮುದಾಯದವರ ನೋವಿಗೆ ಪರಿಹಾರ ಕಂಡು ಹಿಡಿಯುವ ಸಂಕಲ್ಪದೊಂದಿಗೆ ಜ್ಯೋತಿರಾವ್ ಫುಲೆ ಅವರು ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರನ್ನು ಶಿಕ್ಷಕಿಯಾಗಿಸುವ ತೀರ್ಮಾನ ಮಾಡಿದರು. ಇತಿಹಾಸದಲ್ಲಿ ಇಂತಹ ಹಲವು ಮಹನೀಯರು ಮರೆಯಾಗಿದ್ದಾರೆ. ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಆದರ್ಶ ಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ಜ್ಯೋತಿರಾವ್ ಫುಲೆ ಅವರು ಪತ್ನಿಯನ್ನು ಶಿಕ್ಷಣ ತರಬೇತಿ ಕೇಂದ್ರಕ್ಕೆ ಸೇರಿಸಿ ತರಬೇತಿ ಕೊಡಿಸಿದರು. ಬಳಿಕ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ಕೆಲಸಕ್ಕೆ ಮುಂದಾದರು. ಆಗ ಕೆಲವರು ದೇಶದ ಸಂಸ್ಕೃತಿ ಹಾಳು ಮಾಡುತ್ತಿರುವ ಇವರಿಗೆ ತಕ್ಕ ಶಾಸ್ತಿಯಾಗಬೇಕೆಂದು ಸಾವಿತ್ರಿಬಾಯಿ ಫುಲೆಯ ಮಾವನ ಮೇಲೆ ಒತ್ತಡ ಹೇರಿದರು. ಇದರಿಂದ ಜ್ಯೋತಿರಾವ್‌ ಫುಲೆ ದಂಪತಿಗೆ ಮನೆ ತೊರೆಯವ ಪರಿಸ್ಥಿತಿ ಬಂದಿತು’ ಎಂದು ವಿವರಿಸಿದರು.

‘ಮನೆ ಬಿಟ್ಟು ಹೊರಬಂದ ಜ್ಯೋತಿರಾವ್‌ ಫುಲೆ ದಂಪತಿ ಮುಸ್ಲಿಂ ಸಮುದಾಯದ ಗೆಳೆಯನ ಬಳಿ ಆಶ್ರಯ ಪಡೆದರು. ನಂತರ ಕೆಲ ದಿನಗಳಲ್ಲೇ ಫಾತಿಮಾ ಬೇಗಂ ಎಂಬುವರನ್ನು ಮೊದಲ ಮುಸ್ಲಿಂ ಶಿಕ್ಷಕಿಯನ್ನಾಗಿ ರೂಪುಗೊಳಿಸಿದರು. ಇದರಿಂದ ಮಡಿವಂತ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೂ ಶಿಕ್ಷಣ ಸಿಗುವಂತಾಯಿತು’ ಎಂದು ಸ್ಮರಿಸಿದರು.

ಮರು ಮದುವೆ: ‘ಸಾವಿತ್ರಿ ಬಾಯಿಫುಲೆ ದಂಪತಿ ವಿಧವೆಯರಿಗೆ ಮರು ಮದುವೆ ಮಾಡಿದರು. ಬಾಲ್ಯವಿವಾಹ ತಡೆಗೆ ಪ್ರಯತ್ನಿಸಿದರು. ಪ್ಲೇಗ್‌ನಂತಹ ಗಂಭೀರ ಕಾಯಿಲೆಯಿಂದ ಬಳಲುವವರನ್ನು ರಕ್ಷಿಸಿದರು. ಕೊನೆಗೆ ಪ್ಲೇಗ್‌ ಕಾಯಿಲೆಯಿಂದಲೇ ಸಾವಿತ್ರಿಬಾಯಿ ಫುಲೆ ಮೃತಪಟ್ಟರು. ಯುವಕ ಯುವತಿಯರು ಅಂತಹ ಕ್ರಾಂತಿಕಾರಿ ಮಹನೀಯರನ್ನು ಸ್ಮರಿಸಿ ಅವರ ತತ್ವಾದರ್ಶ ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

ಗಮನ ಮಹಿಳಾ ಸಮೂಹದ ಸಮನ್ವಯಾಧಿಕಾರಿ ಶಾಂತಮ್ಮ, ಶಾಂತಿ ಸೌಹಾರ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಎಚ್.ಶಾಂತಮ್ಮ, ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ವೆಂಕಟಾಚಲಪತಿ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎಂ.ಅಶ್ವತ್ಥಗೌಡ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ, ವಕೀಲ ಸತೀಶ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು