ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭ: ಪೋಷಕರ ಅಭಿಪ್ರಾಯಕ್ಕೆ ಮಹತ್ವ

ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿಕೆ
Last Updated 29 ಸೆಪ್ಟೆಂಬರ್ 2020, 15:57 IST
ಅಕ್ಷರ ಗಾತ್ರ

ಕೋಲಾರ: ‘ಶಾಲಾ, ಕಾಲೇಜು ಆರಂಭದ ವಿಚಾರದಲ್ಲಿ ಸರ್ಕಾರ ಪೋಷಕರ ಅಭಿಪ್ರಾಯಕ್ಕೆ ಮಹತ್ವ ನೀಡುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಶಾಲಾ, ಕಾಲೇಜು ಆರಂಭಿಸುವ ಸಂಬಂಧ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರು ಶಿಕ್ಷಣ ತಜ್ಞರು ಹಾಗೂ ಪೋಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಕೋವಿಡ್‌–19 ಮತ್ತು ಲಾಕ್‌ಡೌನ್‌ನಿಂದ ಅಬಕಾರಿ ಇಲಾಖೆ ಆದಾಯ ಕಡಿಮೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು ₹ 1 ಸಾವಿರ ಕೋಟಿ ವ್ಯತ್ಯಾಸವಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಜನ ಗುಂಪುಗೂಡದಂತೆ ಕ್ರಮ ವಹಿಸಲು ಸುಪ್ರೀಂ ಕೋರ್ಟ್ ಸೂಚಿಸಿದ್ದರಿಂದ ಆನ್‌ಲೈನ್‌ ಮೂಲಕ ಮದ್ಯ ಮಾರಾಟ ಮಾಡುವ ಬಗ್ಗೆ ಚರ್ಚಿಸಲಾಯಿತೇ ಹೊರತು ಬೇರೆ ಉದ್ದೇಶದಿಂದ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ದೇಶದಲ್ಲಿ ಕೋವಿಡ್–19 ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇತ್ತೀಚೆಗೆ ಹೆಚ್ಚಿನ ಮಂದಿಗೆ ಕೋವಿಡ್‌ ಪರೀಕ್ಷೆ ಮಾಡುತ್ತಿರುವುದರಿಂದ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಆದರೂ ಸೋಂಕಿತರು ಅಷ್ಟೇ ಪ್ರಮಾಣದಲ್ಲಿ ಗುಣಮುಖರಾಗುತ್ತಿರುವುದು ಸಮಾಧಾನಕರ ಸಂಗತಿ’ ಎಂದು ತಿಳಿಸಿದರು.

ವಸೂಲಿ ಗಿರಾಕಿಯಲ್ಲ: ‘ನಾನು ವಸೂಲಿ ಗಿರಾಕಿಯಲ್ಲ. ಇಲಾಖೆಯಲ್ಲಿ ನಾನು ಯಾವುದೇ ಕಮಿಷನ್‌ ಪಡೆಯುವುದಿಲ್ಲ. ನನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದದ್ದು. ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಿರುವ ಬಗ್ಗೆ ಶಾಸಕ ನಂಜೇಗೌಡರು ಆರೋಪ ಮಾಡಿದ್ದಾರೆ. ಅಧಿಕಾರಿಗಳ ವಿರುದ್ಧ ಆರೋಪ ಸಾಮಾನ್ಯ. ನಿರ್ದಿಷ್ಟವಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ದೂರು ನೀಡಿದರೆ ನಾನೇ ಶಿಸ್ತುಕ್ರಮ ಜರುಗಿಸುವೆ’ ಎಂದರು.

‘ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೊರತುಪಡಿಸಿ ಕೆಲ ಸ್ವಯಂಘೋಷಿತ ಮುಖಂಡರಿದ್ದಾರೆ. ಆ ಮುಖಂಡರು ನನ್ನಿಂದ ಇಲಾಖೆಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮಗೆ ಕಮಿಷನ್‌ ವಸೂಲಿಯ ಜವಾಬ್ದಾರಿ ನೀಡಿ ಎಂದು ಒತ್ತಾಯಿಸಿದ್ದರು. ಅವರ ಮಾತಿಗೆ ಒಪ್ಪದ್ದಿದ್ದಕ್ಕೆ ನನ್ನ ವಿರುದ್ಧ ಕೊತ್ತೂರು ಮಂಜುನಾಥ್‌ ಬಳಿ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ಕೊತ್ತೂರು ಮಂಜುನಾಥ್ ಸ್ವಂತ ಬುದ್ಧಿಯಿಂದ ನನ್ನ ವಿರುದ್ಧ ಮಾತನಾಡುವುದಿಲ್ಲ. ಅವರ ಬೆಂಬಲಿಗರು ಹೇಳಿದ್ದನ್ನು ಕೇಳಿ ಮಾತನಾಡುತ್ತಿದ್ದಾರೆ. ನಾನು ಇಂದಿಗೂ ಅವರ ಜತೆ ಚೆನ್ನಾಗಿಯೇ ಇದ್ದೇನೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಹಶೀಲ್ದಾರ್‌ಗೆ ಶ್ರದ್ಧೆಯಿಲ್ಲ: ‘ಕೋಲಾರ ತಹಶೀಲ್ದಾರ್ ಶೋಭಿತಾ ಹೊಸಬರಾದರೂ ತನಗೆ ಎಲ್ಲಾ ಗೊತ್ತಿದೆ ಎಂಬಂತೆ ವರ್ತಿಸುತ್ತಾರೆ. ಕೋಲಾರ ಕೆಲಸ ಕಲಿಯಲು ಸೂಕ್ತ ಸ್ಥಳವಾದರೂ ಅವರಿಗೆ ಶ್ರದ್ಧೆಯಿಲ್ಲ. ಬಡ ಜನರ ಸಮಸ್ಯೆಗೆ ಹೇಗೆ ಸ್ಪಂದಿಸಬೇಕೆಂದು ಅವರಿಗೆ ಗೊತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಸ್‌.ಅಗ್ರಹಾರ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ನನ್ನನ್ನು ಆಹ್ವಾನಿಸಿರಲಿಲ್ಲ. ಸರ್ಕಾರಿ ರಜಾ ದಿನವಾದ ಭಾನುವಾರ ಕಾರ್ಯಕ್ರಮ ನಡೆದರೂ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದಾರೆ. ಅಧಿಕಾರಿಗಳು ಯಾಕೆ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂಬ ಪ್ರಜ್ಞೆ ಅಲ್ಲಿಗೆ ಬಂದಿದ್ದ ಶಾಸಕರಿಗೂ ಇರಬೇಕಾಗಿತ್ತು’ ಎಂದು ಗುಡುಗಿದರು.

‘ನನ್ನ ಹಾಗೂ ಸಂಸದರ ನಡುವೆ ಮನಸ್ತಾಪವಿಲ್ಲ. ಆದರೆ, ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ. ಇದರಿಂದ ಅವರಿಗೆ ಏನೂ ಪ್ರಯೋಜನ ಆಗುವುದಿಲ್ಲ. ಶಿಷ್ಟಾಚಾರ ಉಲ್ಲಂಘನೆ ಸಂಬಂಧ ಹಕ್ಕು ಬಾಧ್ಯತಾ ಸಮಿತಿಗೆ ದೂರು ಕೊಟ್ಟಿದ್ದೇನೆ. ತಹಶೀಲ್ದಾರ್ ಮತ್ತು ಸಣ್ಣ ನೀರಾವರಿ ಇಲಾಖೆಯ ಇಬ್ಬರು ಅಧಿಕಾರಿಗಳು ವಿಚಿತ್ರವಾಗಿ ಆಡುತ್ತಿದ್ದಾರೆ. ಇವರ ಮೇಲೆ ಹಂತ ಹಂತವಾಗಿ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದ್ಯದಲ್ಲೇ ದೆಹಲಿಗೆ ಹೋಗಲಿದ್ದು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಸಂಬಂಧ ತೀರ್ಮಾನ ಮಾಡಲಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT