ವಿಜ್ಞಾನ ಒಂದು ಕ್ಷೇತ್ರಕ್ಕೆ ಸಿಮೀತವಲ್ಲ: ಪ್ರೊ.ಟಿ.ಡಿ.ಕೆಂಪರಾಜು

7
14ನೇ ಕನ್ನಡ ವಿಜ್ಞಾನ ಸಮ್ಮೇಳನದ ಸಮಾರೋಪ

ವಿಜ್ಞಾನ ಒಂದು ಕ್ಷೇತ್ರಕ್ಕೆ ಸಿಮೀತವಲ್ಲ: ಪ್ರೊ.ಟಿ.ಡಿ.ಕೆಂಪರಾಜು

Published:
Updated:
Deccan Herald

ಕೋಲಾರ: ‘ವಿಜ್ಞಾನ ಒಂದು ಕ್ಷೇತ್ರಕ್ಕೆ ಸಿಮೀತಗೊಂಡಿಲ್ಲ. ಸಂಶೋಧನೆ, ಆವಿಷ್ಕಾರದ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಪ್ರಕಟಗೊಂಡಾಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ’ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ವದೇಶಿ ವಿಜ್ಞಾನ ಆಂದೋಳನದಿಂದ ಭಾನುವಾರ ನಡೆದ 14ನೇ ಕನ್ನಡ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಎಲ್ಲದರ ಫಲಿತಾಂಶಗಳು ಸಾಮಾನ್ಯ ಜನರಿಗೆ ಅರ್ಥವಾಗುವ ನಿಟ್ಟಿನಲ್ಲಿ ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸುವ ಕೆಲಸ ಅಗಬೇಕು’ ಎಂದರು.

‘ಉನ್ನತ ಶಿಕ್ಷಣದಲ್ಲಿ ಶೇ.50ರ ಗಡಿ ತಲುಪಿಲ್ಲ. ಹೀಗಾಗಿ ಅದರ ಕುರಿತಾಗಿ ಸಂಶೋಧನೆಗಳು ಹೆಚ್ಚಿಸಬೇಕು. ವಿಜ್ಞಾನದಲ್ಲಿ ಕನ್ನಡ ಸಾಹಿತ್ಯ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಅಗತ್ಯವಾಗಿದ್ದು, ಕನ್ನಡ ಪ್ರಕಾಶಕರನ್ನು ಗುರುತಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

‘ವಿಜ್ಞಾನ ಕ್ಷೇತ್ರದಲ್ಲಿ ಬದಲಾವಣೆ, ಸಂಶೋಧನೆ, ಆವಿಷ್ಕಾರ ನಿರಂತರವಾಗಿ ನಡೆಯುತ್ತಿದೆ. ಆದರೆ, ಇವುಗಳ ಫಲಿತಾಂಶ ಮಾತ್ರ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಾಗಿ ವಿಷಯಗಳು ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಭಾಷೆಗಳಲ್ಲಿ ಪ್ರಕಟಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ’ ಎಂದು ಸಲಹೆ ನೀಡಿದರು.

‘ನ್ಯಾನೋ ಎನ್ನುವುದು ಚಿಕ್ಕ ವಸ್ತು. ಅದರ ಕುರಿತಾದ ಸಂಶೋಧನೆಗಳನ್ನು ನಮ್ಮಲ್ಲಿ ನಿರಂತರವಾಗಿ ನಡೆಸುತ್ತಿದ್ದೇವೆ. ಈಗಾಗಲೇ ಹಲವಾರು ಆವಿಷ್ಕಾರಗಳನ್ನು ನಡೆಸಿದ್ದು ಸಮಾಜಕ್ಕೆ ಪರಿಚಯಿಸುವ ಕೆಲಸ ನಡೆಯುತ್ತಿದೆ’ ಎಂದು ಬೆಂಗಳೂರಿನ ನ್ಯಾನೋ ಮತ್ತು ಮೃದು ಪದಾರ್ಥಗಳ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಜಿ.ಯು.ಕುಲಕರ್ಣಿ ಹೇಳಿದರು.

‘ಕೇಂದ್ರಕ್ಕೆ ಯಾರು ಬೇಕಾದರೂ ಬಂದು ಸ್ವತಃ ಪ್ರಯೋಗಗಳನ್ನು ಮಾಡಲು ಅವಕಾಶ ಕಲ್ಪಿಸಲಾಗುವುದು. ಇ-ಮೇಲ್ ಮುಖಾಂತರ ನೋಂದಣಿ ಮಾಡಿಸಿಕೊಳ್ಳಬೇಕು. ಸ್ವದೇಶಿ ವಿಜ್ಞಾನ ಆಂದೋಳನವು ಬಹಳ ಚಟುವಟಿಕೆಯಿಂದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ’ ಎಂದರು.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಎಂ.ಎಸ್.ರೆಡ್ಡಿ ಮಾತನಾಡಿ, ‘ವಿಜ್ಞಾನಕ್ಕೆ ಸಂಬಂಧಿಸಿದ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಹೊಸ ವಿಷಯಗಳ ಬಗ್ಗೆ ಅವಿಷ್ಕಾರ, ಸಂಶೋಧನೆ ನಡೆಸಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

‘ವಿಜ್ಞಾನ ಕೇವಲ ಒಂದು ಕ್ಷೇತ್ರ, ಒಂದು ಭಾಷೆಗೆ ಸಿಮೀತಗೊಂಡಿಲ್ಲ. ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಶಿಬಿರಗಳಲ್ಲಿ ವಿಷಯ ಮಂಡನೆ ಮಾಡಲು ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಪ್ರೊ.ಜಿ.ಯು.ಕುಲಕರ್ಣಿ ಅವರಿಗೆ ಸಿ.ಎನ್.ಆರ್.ರಾವ್ ವಿಜ್ಞಾನ ಪುರಸ್ಕಾರ ಪ್ರಧಾನ ಮಾಡಲಾಯಿತು. ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ ಪ್ರತಿನಿಧಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.

ತೋಟಗಾರಿಕೆ ಮಹಾ ವಿದ್ಯಾಲಯದ ಡೀನ್ ಪ್ರೊ.ಪ್ರಕಾಶ್, ಸ್ವದೇಶಿ ವಿಜ್ಞಾನ ಆಂದೋಳನದ ಸ್ಥಾಪಕ ಪ್ರೊ.ಕೆ.ಐ.ವಾಸು, ಪ್ರಧಾನ ಕಾರ್ಯದರ್ಶಿ ರಮೇಶ್, ಗುಲಬರ್ಗಾ ವಿಶ್ವ ವಿದ್ಯಾಲಯದ ವಿ ನಿವೃತ್ತ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ, ದೇವರಾಜ ಅರಸ್ ಕಾಲೇಜಿನ ಪರೀಕ್ಷಾ ನಿಯಂತ್ರಕ ಡಾ.ಮುನಿನಾರಾಯಣಪ್ಪ, ಪ್ರಾಧ್ಯಾಪಕಿ ಸುಗುಣ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !