ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೌಟ್ಸ್-ಗೈಡ್ಸ್ ಶಿಕ್ಷಣ ಬಾಳಿಗೆ ದಾರಿದೀಪ

ಸಂಸ್ಥಾಪಕರ ದಿನಾಚರಣೆಯಲ್ಲಿ ಚಿನ್ಮಯ ಶಾಲೆ ಅಧ್ಯಕ್ಷ ಚಂದ್ರಪ್ರಕಾಶ್‌ ಅಭಿಪ್ರಾಯ
Last Updated 23 ಫೆಬ್ರುವರಿ 2021, 11:54 IST
ಅಕ್ಷರ ಗಾತ್ರ

ಕೋಲಾರ: ‘ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣವು ಬಾಳಿಗೆ ದಾರಿ ದೀಪ. ಸಂಸ್ಥೆಯು ಶಿಸ್ತು ಹಾಗೂ ಸಂಯಮಕ್ಕೆ ಹೆಸರಾಗಿದೆ’ ಎಂದು ಚಿನ್ಮಯ ಶಾಲೆ ಅಧ್ಯಕ್ಷ ಚಂದ್ರಪ್ರಕಾಶ್‌ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿ, ‘ಸ್ಕೌಟ್ಸ್‌ ಗೈಡ್ಸ್‌ ಸಂಸ್ಥೆಯು 1907ರ ಆಗಸ್ಟ್‌ನಲ್ಲಿ 20 ಸದಸ್ಯರಿಂದ ಆರಂಭಗೊಂಡಿತು. ಇಂದು 176ಕ್ಕೂ ಹೆಚ್ಚು ದೇಶಗಳಲ್ಲಿ ಕೋಟ್ಯಂತರ ಸದಸ್ಯರನ್ನು ಹೊಂದಿದೆ’ ಎಂದು ತಿಳಿಸಿದರು.

‘ಇಂದಿಗೂ ಕ್ರಿಯಾಶೀಲವಾಗಿರುವ ಸಂಸ್ಥೆಯು ವಿದ್ಯಾರ್ಥಿ ಸಮುದಾಯದಲ್ಲಿ ದೇಶ ಪ್ರೇಮ ಮತ್ತು ಜೀವನ ಮೌಲ್ಯ ಬೆಳೆಸುತ್ತಿದೆ. ಬದಲಾಗುತ್ತಿರುವ ರಾಜಕೀಯ ವ್ಯವಸ್ಥೆಯಿಂದ ಅನೇಕ ಸಂಸ್ಥೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಆದರೆ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬೇರುಗಳು ಇಂದಿಗೂ ಬಲಿಷ್ಠವಾಗಿವೆ. ಸಂಸ್ಥೆಗೆ ಇನ್ನಷ್ಟು ಬಲ ತುಂಬುವ ಅಗತ್ಯವಿದೆ’ ಎಂದು ಕಿವಿಮಾತು ಹೇಳಿದರು.

‘ದೇಶದ ಭವಿಷ್ಯ ಯುವ ಸಮುದಾಯದ ಮೇಲೆ ನಿಂತಿದೆ. ದೇಶದ ಅಮೂಲ್ಯ ಆಸ್ತಿಯಾದ ಯುವ ಸಮುದಾಯವು ಸರಿ ದಾರಿಯಲ್ಲಿ ಸಾಗಬೇಕು. ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ಸಾಹಸ, ನಾಯಕತ್ವ ಗುಣ ಬಿತ್ತುತ್ತಿದೆ. ಯುವ ಪೀಳಿಗೆಯು ಸಮಾಜಕ್ಕೆ ಆದರ್ಶಗಳನ್ನು ತಲುಪಿಸುವ ಕೆಲಸ ಮಾಡಬೇಕು. ಅರ್ಪಣಾ ಮನೋಭಾವದಿಂದ ಸಮಾಜ ಸೇವೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್ ಶಿಕ್ಷಣ ಪಡೆದರೆ ಸಾಕಷ್ಟು ಬದಲಾವಣೆ ಜತೆಗೆ ಭವಿಷ್ಯಕ್ಕೆ ಬೇಕಾದ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ಕೌಶಲಗಳನ್ನು ಮೈಗೂಡಿಸಿಕೊಳ್ಳಬಹುದು. ಮಕ್ಕಳು ಇಂತಹ ಶಿಕ್ಷಣ ಪಡೆಯುವಲ್ಲಿ ಪೋಷಕರ ಸಹಕಾರ ಅಗತ್ಯ. ಜಾಗತಿಕ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸ್ಕೌಟ್ಸ್ ಗೈಡ್ಸ್‌ ಶಿಕ್ಷಣ ಪೂರಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಅದೃಷ್ಟವಂತರು: ‘ಸ್ಕೌಟ್ಸ್-ಗೈಡ್ಸ್ ಶಿಕ್ಷಣದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಅದೃಷ್ಟವಂತರು. ಇಂತಹ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಸಮಾಜಕ್ಕೆ ಸೈನಿಕರಂತೆ ಸೇವೆ ಸಲ್ಲಿಸುವ ಸೇವಾ ಮನೋಭಾವನೆ ಬಲಗೊಳ್ಳಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.

‘ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್‌ ಶಿಕ್ಷಣ ಮಕ್ಕಳಿಗೆ ತಲುಪುವಲ್ಲಿ ತರಬೇತಿ ಪಡೆದ ಶಿಕ್ಷಕರ ಪಾತ್ರ ನಿರ್ಣಾಯಕ. ಈ ಕಾರ್ಯಕ್ಕೆ ಸಮುದಾಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಮಾಜಮುಖಿ ಕೆಲಸ ಮಾಡುತ್ತಿದೆ. ಸಂಸ್ಥೆಯ ಸೇವಾ ಕಾರ್ಯ ನಿರಂತರವಾಗಿ ಸಾಗಲಿ’ ಎಂದು ಆಶಿಸಿದರು.

ಸಂಸ್ಥೆ ಆಶಯ: ‘ಸ್ಕೌಟ್ಸ್-ಗೈಡ್ಸ್ ಶಿಕ್ಷಣ ಗುಂಪುಗಳಲ್ಲಿ ಗೆಳೆಯರೊಂದಿಗೆ ಅರಿತು ಬೆರೆತು ನೋಡುತ್ತಾ, ಮಾಡುತ್ತಾ ಕಲಿಯುವ ಪದ್ಧತಿಯಾಗಿದೆ. ಜಗತ್ತಿನ 246ಕ್ಕೂ ಹೆಚ್ಚು ದೇಶಗಳು ಒಪ್ಪಿಕೊಂಡು ಮುನ್ನಡೆಸುತ್ತಿರುವ ಚಳವಳಿಯಾಗಿದೆ. ಇಂತಹ ಶಿಕ್ಷಣ ಎಲ್ಲಾ ಮಕ್ಕಳಿಗೂ ತಲುಪಬೇಕು ಎಂಬುದು ಸಂಸ್ಥೆಯ ಆಶಯ’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ವಿವರಿಸಿದರು.

ಚಿನ್ಮಯ ಶಾಲೆ ಪ್ರಾಂಶುಪಾಲ ಜಯರಾಜ್, ಉಪ ಪ್ರಾಂಶುಪಾಲ ಪ್ರಸಾದ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪದಾಧಿಕಾರಿಗಳಾದ ಜಯಶ್ರೀ, ಸುರೇಶ್, ವಿಶ್ವನಾಥ್, ರಾಜೇಶ್ವರಿ, ಶ್ರೀನಿವಾಸ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT