ಎಂಆರ್ಪಿ ದರದಲ್ಲಿ ರಸಗೊಬ್ಬರ ಮಾರಿ
ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗಿದ್ದು, ಕೃಷಿ ಪರಿಕರ ಮಾರಾಟಗಾರರು ಎಂಆರ್ಪಿ ದರದಲ್ಲೇ ರಸಗೊಬ್ಬರಗಳನ್ನು ಮಾರಾಟ ಮಾಡಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ರಸಗೊಬ್ಬರಗಳ ಮಾರಾಟದ ಬೆಲೆಯಲ್ಲಿ ಇತ್ತೀಚೆಗೆ ಕೆಲ ಬದಲಾವಣೆಗಳಾಗಿದ್ದು, ಪರಿಷ್ಕೃತ ಮಾರಾಟ ದರವನ್ನು ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆ ಮಾಡಲಾಗಿದೆ. ಪ್ರಮುಖವಾಗಿ ಡಿಎಪಿ ರಸಗೊಬ್ಬರದ ಬೆಲೆಯನ್ನು ₹ 1,700ರಿಂದ ಪುನ: ₹ 1,200ಕ್ಕೆ ಪರಿಷ್ಕರಿಸಲಾಗಿದ್ದು, ಮಾರಾಟಗಾರರು ಪರಿಷ್ಕೃತ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದು ತಿಳಿಸಿದ್ದಾರೆ.
ಕೋವಿಡ್ ಹಾಗೂ ಲಾಕ್ಡೌನ್ನಿಂದ ರೈತರು ಸಂಕಷ್ಟದಲ್ಲಿದ್ದು, ಕೃಷಿ ಪರಿಕರ ಮಾರಾಟಗಾರರು ರೈತಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಬಾರದು ಮತ್ತು ದರಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಕಾನೂನು ಉಲ್ಲಂಘಿಸಿದರೆ ಅಂತಹ ಮಾರಾಟಗಾರರ ವಿರುದ್ಧ ರಸಗೊಬ್ಬರ ನಿಯಂತ್ರಣ ಆದೇಶ 1985ರ ಪ್ರಕಾರ ಶಿಸ್ತುಕ್ರಮ ಕೈಗೊಂಡು ವಾಣಿಜ್ಯ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಳಿಗೆಗಳ ಬಳಿ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಗೊಬ್ಬರ ಅಥವಾ ಬಿತ್ತನೆ ಬೀಜ ಖರೀದಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಜತೆಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು ಮತ್ತು ಮಳಿಗೆಗಳ ಬಳಿ ಅಂತರ ಕಾಯ್ದುಕೊಂಡು ಖರೀದಿ ಮಾಡಬೇಕು ಎಂದು ಸೂಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.