ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೈನ್‌ಮೆಂಟ್‌ ಝೋನ್‌ ಕಸ ಪ್ರತ್ಯೇಕಿಸಿ

ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕಿ ಕಾವೇರಿ ಸೂಚನೆ
Last Updated 20 ಮೇ 2020, 14:49 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕಿತರಿರುವ ನಿರ್ಬಂಧಿತ ಪ್ರದೇಶದಲ್ಲಿ (ಕಂಟೈನ್‌ಮೆಂಟ್‌ ಝೋನ್‌) ಪ್ರತಿನಿತ್ಯ ಉತ್ಪತ್ತಿಯಾಗಿವ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಿ’ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ವಿ.ಕಾವೇರಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನಿಂದ ಬುಧವಾರ ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಕಂಟೈನ್‌ಮೆಂಟ್‌ ಝೋನ್‌ನಲ್ಲಿನ ಕಸ ಸಂಗ್ರಹಿಸುವಾಗ ಹೆಚ್ಚು ನಿಗಾ ಅಗತ್ಯ. ಆ ಕಸವನ್ನು ಇತರೆ ಬಡಾವಣೆಗಳ ಕಸದೊಂದಿಗೆ ಸೇರಿಸಬೇಡಿ. ಕಸವನ್ನು ಪ್ರತ್ಯೇಕವಾಗಿಟ್ಟು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ’ ಎಂದು ಸಲಹೆ ನೀಡಿದರು.

‘ಕೊರೊನಾ ಸೋಂಕು ಇಡೀ ವಿಶ್ವವನ್ನೇ ಆವರಿಸಿದೆ. ಇದೀಗ ಲಾಕ್‌ಡೌನ್‌ ಸಡಿಲಿಕೆ ಮಾಡಿ ಸೋಂಕಿತರು ಇರುವ ಪ್ರದೇಶಗಳನ್ನು ಮಾತ್ರ ಕಂಟೈನ್‌ಮೆಂಟ್‌ ಝೋನ್‌ಗಳಾಗಿ ಪರಿವರ್ತಿಸಲಾಗಿದೆ. ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಮುಖ್ಯ. ಅವರಿಗೆ ನೀಡಿರುವ ಸುರಕ್ಷತಾ ಸಾಮಗ್ರಿಗಳನ್ನು ಕಡ್ಡಾಯವಾಗಿ ಬಳಸಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಪೌರ ಕಾರ್ಮಿಕರು ಕಸ ಸಂಗ್ರಹಿಸುವ ಅತ್ಯಂತ ಪ್ರಮುಖ ಕಾರ್ಯದಲ್ಲಿ ತೊಡಗಿರುತ್ತಾರೆ. ಅವರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಅವರಿಗೆ ಸುರಕ್ಷತಾ ಸಲಕರಣೆ ನೀಡುವುದರ ಜತೆಗೆ ಅವುಗಳನ್ನು ಬಳಸುವಂತೆ ಮಾರ್ಗದರ್ಶನ ನೀಡಿ’ ಎಂದು ಹೇಳಿದರು.

ಮನೆಗೆ ತಲುಪಿಸಿ: ‘ನಿರ್ಬಂಧಿತ ಪ್ರದೇಶಗಳಲ್ಲಿ ಜನ ಮನೆಯಿಂದ ಹೊರ ಬಾರದಂತೆ ಕಟ್ಟೆಚ್ಚರ ವಹಿಸಿ. ಅಲ್ಲಿನ ನಿವಾಸಿಗಳಿಗೆ ದೈನಂದಿನ ಬಳಕೆಗೆ ಅಗತ್ಯವಿರುವ ದಿನಸಿ, ತರಕಾರಿ ಹಾಗೂ ಇತರೆ ವಸ್ತುಗಳನ್ನು ಮನೆಗಳಿಗೆ ತಲುಪಿಸಿ. ಲಾಕ್‌ಡೌನ್‌ ಸಡಿಲಿಕೆಯಾಗಿದೆ ಎಂದು ಜನರು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳದಿದ್ದರೆ ಶಿಸ್ತುಕ್ರಮ ಕೈಗೊಳ್ಳಿ’ ಎಂದು ಆದೇಶಿಸಿದರು.

‘ಜನರು ಮನೆಯಿಂದ ಹೊರ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂಗಡಿಗಳಲ್ಲಿ ವಹಿವಾಟಿನ ವೇಳೆ ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಪಾಲನೆಯಾಗುತ್ತಿದೆಯೇ ಎಂಬ ಬಗ್ಗೆ ಗಮನಹರಿಸಿ. ಸುರಕ್ಷತಾ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳುವುದು ಅಂಗಡಿ ಮಾಲೀಕರ ಜವಾಬ್ದಾರಿ’ ಎಂದು ಹೇಳಿದರು.

ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್, ಕಂದಾಯ ಅಧಿಕಾರಿ ಚಂದ್ರು, ಕಚೇರಿ ವ್ಯವಸ್ಥಾಪಕ ಮಂಜುನಾಥ್, ಕಂದಾಯ ನಿರೀಕ್ಷಕ ತ್ಯಾಗರಾಜ್, ಆರೋಗ್ಯ ನಿರೀಕ್ಷಕರಾದ ಪೃಥ್ವಿ, ದೀಪಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT