ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಭದ್ರತೆ: ಅತಿಥಿ ಉಪನ್ಯಾಸಕರ ಪ್ರತಿಭಟನೆ

ತರಕಾರಿ–ಕಾಫಿ ಟೀ ಮಾರಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ
Last Updated 22 ಡಿಸೆಂಬರ್ 2021, 16:24 IST
ಅಕ್ಷರ ಗಾತ್ರ

ಕೋಲಾರ: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಹೋರಾಟ ಬೆಂಬಲಿಸಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಇಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಸರ್ವಜ್ಞ ಉದ್ಯಾನದ ಬಳಿ ತರಕಾರಿ, ಬೂಟ್ ಪಾಲಿಶ್, ಇಸ್ತ್ರೀ, ಗುಜರಿ ಅಂಗಡಿ ತೆರೆದು ಕಾಫಿ ಟೀ ಹಾಗೂ ಸೌಂದರ್ಯ ವರ್ಧಕಗಳನ್ನು ಮಾರಿ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಗೌರವಧನ ಹೆಚ್ಚು ಮಾಡುವಂತೆ ಹಲವು ಬಾರಿ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ’ ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ನೂರ್‍ ಅಹಮ್ಮದ್‌ ಆರೋಪಿಸಿದರು.

‘ಅತಿಥಿ ಉಪನ್ಯಾಸಕರು ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪಡೆದಿದ್ದರೂ ಇಂದೂ ನಮ್ಮ ಪರಿಸ್ಥಿತಿ ಕೂಲಿ ಕಾರ್ಮಿಕರಿಗಿಂತ ಹೀನಾಯವಾಗಿದೆ. ಜೀತಮುಕ್ತ ಸಮಾಜ,- ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಕಾನೂನು ತರುತ್ತಿರುವ ಸರ್ಕಾರಗಳು ಶಿಕ್ಷಣ ಇಲಾಖೆಯಲ್ಲಿ ಜೀತ ಮತ್ತು ಶೋಷಣೆಯ ವಾತಾವರಣ ನಿರ್ಮಿಸಿರುವುದು ದೇಶದ ದುರಂತ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೆಸಿಎಸ್‌ಆರ್‌ 1977ರ ನಿಯಮ (1), (2) (3) ಮತ್ತು 14ರ ಅಡಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ತಾತ್ಕಾಲಿಕ ನೌಕರರನ್ನು ಸೇವೆಯಲ್ಲಿ ವಿಲೀನಗಿಳಿಸಲು ಅವಕಾಶವಿದೆ. ಸಂವಿಧಾನದ ಕಲಂ 209ರ ಪ್ರಕಾರ ತಾತ್ಕಾಲಿಕ ನೌಕರರನ್ನು ಕಾಯಂ ಮಾಡಲು ಇಲಾಖೆಯ ಸಿ ಮತ್ತು ಆರ್‌ ನಿಯಮಾವಳಿಗೆ ತಿದ್ದುಪಡಿ ಮಾಡಬಹುದು’ ಎಂದು ಸಂಘದ ಕಾರ್ಯದರ್ಶಿ ವಿ.ಶಿವ ಹೇಳಿದರು.

‘ಹಲವು ವರ್ಷಗಳಿಂದ ಪ್ರತಿಭಟನೆ ಮೂಲಕ ಬೇಡಿಕೆ ಸಲ್ಲಿಸಿದರೂ ನೀಡಿದರೂ ಸರ್ಕಾರ ಕುಂಟು ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡುತ್ತಿದೆ. ರಾಜ್ಯದ ಪದವಿ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಅತಿಥಿ ಉಪನ್ಯಾಸಕರ ಕೊಡುಗೆ ಅಪಾರ. ಆದರೆ, ನಮ್ಮ ಕಷ್ಟಕ್ಕೆ ಉನ್ನತ ಶಿಕ್ಷಣ ಇಲಾಖೆ ಮತ್ತು ಮುಖ್ಯಮಂತ್ರಿಗಳು ಸ್ಪಂದಿಸದಿರುವುದು ದುರಂತ’ ಎಂದು ಸಂಘದ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ವಿಷಾದ ವ್ಯಕ್ತಪಡಿಸಿದರು.

ನ್ಯಾಯಾಂಗ ನಿಂದನೆ: ‘ಸಮಾನ ಕೆಲಸಕ್ಕೆ- ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ರಾಜ್ಯ ಸರ್ಕಾರ ಕಾಯಂ ಉಪನ್ಯಾಸಕರಿಗೆ ನೀಡುವ ಸಂಬಳದ ಜತೆಗೆ ಅವರಿಗೆ ನೀಡುವ ಎಲ್ಲಾ ಸೇವಾ ಭದ್ರತೆಗಳನ್ನು ಅತಿಥಿ ಉಪನ್ಯಾಸಕರಿಗೂ ಒದಗಿಸಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಮುಂದೆ ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

‘ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ದೇಶದ ಇತರೆ ರಾಜ್ಯಗಳ ಮಾದರಿಯಲ್ಲಿ ಕನಿಷ್ಠ ವೇತನ ನಿಗದಿಪಡಿಸಬೇಕು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷದ ಸೇವೆಗೆ ಕನಿಷ್ಠ 3 ಕೃಪಾಂಕ ನೀಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಕನಿಷ್ಠ 6 ತಿಂಗಳ ವೇತನಸಹಿತ ಮಾತೃತ್ವ ರಜೆ ನೀಡಬೇಕು. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿಯಪ್ಪ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಲಕ್ಷ್ಮೀದೇವಿ, ಉಪನ್ಯಾಸಕರಾದ ರವಿ, ತ್ಯಾಗರಾಜು, ಎಚ್.ಎಂ ಶಿವರಾಜ್, ಅಶೋಕ್, ಕೆ.ರಮಾನಂದ, ಕಾವೇರಪ್ಪ, ಎಚ್.ಎಂ, ಬಾಲಾಜಿ, ಗೋಪಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT