ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿದಾರರಿಗೆ ಸೇವೆ: ಬ್ಯಾಂಕ್ ಜವಾಬ್ದಾರಿ

ಪಿಂಚಣಿ ಅದಾಲತ್‌ನಲ್ಲಿ ಖಜಾನೆ ಇಲಾಖೆ ಉಪ ನಿರ್ದೇಶಕಿ ರುಕ್ಮಿಣಿದೇವಿ ಸೂಚನೆ
Last Updated 19 ಡಿಸೆಂಬರ್ 2020, 14:26 IST
ಅಕ್ಷರ ಗಾತ್ರ

ಕೋಲಾರ: ‘ಸುದೀರ್ಘ ಸೇವೆ ನಂತರ ನಿವೃತ್ತರಾದ ನೌಕರರ ವಿಶ್ರಾಂತಿ ಜೀವನದಲ್ಲಿ ಅವರಿಗೆ ನೀಡುವ ಪಿಂಚಣಿಯಲ್ಲಿ ವ್ಯತ್ಯಾಸವಾಗಬಾರದು. ಬ್ಯಾಂಕ್‌ಗಳಿಂದ ಆಗುತ್ತಿರುವ ತೊಂದರೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಖಜಾನೆ ಇಲಾಖೆ ಉಪ ನಿರ್ದೇಶಕಿ ಎನ್.ರುಕ್ಮಿಣಿದೇವಿ ಹೇಳಿದರು.

ಜಿಲ್ಲಾ ಖಜಾನೆ ವತಿಯಿಂದ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್‌ನಲ್ಲಿ ಮಾತನಾಡಿ, ‘ಪಿಂಚಣಿದಾರರ ಕುಂದು ಕೊರತೆಗಳು, ಬ್ಯಾಂಕ್‌ಗಳ ಹೆಚ್ಚುವರಿ ಅಥವಾ ಕಡಿಮೆ ಪಾವತಿಸಿ ಸೇರಿದಂತೆ ಎಲ್ಲಾ ನ್ಯೂನತೆ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲ ನಿರ್ಣಯ ಕೈಗೊಂಡಿದೆ’ ಎಂದರು.

‘ಪಿಂಚಣಿದಾರರ ಎಲ್ಲಾ ಮಾಹಿತಿಯನ್ನು ಖಜಾನೆ–-2ರಲ್ಲಿ ಕ್ರೋಢೀಕರಿಸಲಾಗುತ್ತಿದೆ. ಭವಿಷ್ಯದಲ್ಲಿ ಕಡಿಮೆ ಅಥವಾ ಹೆಚ್ಚುವರಿಯಾಗಿ ಪಾವತಿಸಿರುವ ನ್ಯೂನತೆ ಸರಿಪಡಿಸಲು ಆದೇಶ ಹೊರಡಿಸಲಾಗಿದೆ. ಅದರಂತೆ ಖಜಾನೆಯಲ್ಲಿ ಹಂತಹಂತವಾಗಿ ಗಣಕೀಕರಣ ಕಾರ್ಯ ನಡೆಯುತ್ತಿದೆ. ಇದರಿಂದ ಪಿಂಚಣಿದಾರರ ಹಲವು ತೊಂದರೆ ನಿವಾರಣೆ ಆಗುತ್ತವೆ’ ಎಂದು ಭರವಸೆ ನೀಡಿದರು.

‘ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ಮತ್ತು ಮಾರ್ಗಸೂಚಿ ಅನ್ವಯ ಬ್ಯಾಂಕ್‌ಗಳು ಪಿಂಚಣಿದಾರರಿಗೆ ಉತ್ತಮ ಹಾಗೂ ಆದ್ಯತೆ ಮೇರೆಗೆ ಸೇವೆ ನೀಡಬೇಕು. ಪಿಂಚಣಿದಾರರಿಗೆ ಪ್ರತ್ಯೇಕ ಪಿಂಚಣಿ ಖಾತೆ ತೆರೆಸಲು ಪ್ರಚಾರ ಮಾಡಿ’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಸಾರ್ವಜನಿಕ ಸೇವೆ ಮಾಡಿ ನಿವೃತ್ತರಾದವರಿಗೆ ಅವರ ನಿವೃತ್ತ ಜೀವನದಲ್ಲಿ ತೊಂದರೆ ನೀಡುವುದು ಸರಿಯಲ್ಲ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಬ್ಯಾಂಕ್ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡಬಾರದು’ ಎಂದು ಮನವಿ ಮಾಡಿದರು.

ಸಮಸ್ಯೆಗೆ ಸ್ಪಂದನೆ: ‘ನಿವೃತ್ತರ ಪಿಂಚಣಿ ಸಮಸ್ಯೆಗೆ ಸ್ಪಂದಿಸುವುದು ಅದಾಲತ್‌ನ ಉದ್ದೇಶ. ನಿಜಕ್ಕೂ ಇದು ಉತ್ತಮ ಕಾರ್ಯಕ್ರಮ. ಅದಾಲತ್‌ ಯಶಸ್ವಿಗೊಳಿಸಿ ಪಿಂಚಣಿದಾರರಿಗೆ ಒಳ್ಳೆಯ ಸೇವೆ ಸಿಗುವಂತೆ ಮಾಡಬೇಕು’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ರವಿಚಂದ್ರ ಆಶಿಸಿದರು.

‘ಪಿಂಚಣಿದಾರರಿಗೆ ಬ್ಯಾಂಕ್‌ಗಳಿಂದ ಸಮರ್ಪಕ ಸೇವೆ ಸಿಗುತ್ತಿಲ್ಲ. ಕಾಲಕಾಲಕ್ಕೆ ಪಿಂಚಣಿ ಬಟವಾಡೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪಿಂಚಣಿದಾರರ ಕುರಿತಾದ ಬ್ಯಾಂಕ್‌ಗಳ ನಿರ್ಲಕ್ಷ್ಯ ಧೋರಣೆ ಬದಲಾಗಬೇಕು’ ಎಂದು ಕೋಲಾರ ತಾಲ್ಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ದೇವೀರಪ್ಪ ಒತ್ತಾಯಿಸಿದರು.

ಪ್ರತ್ಯೇಕ ಕೌಂಟರ್‌: ‘ನಿವೃತ್ತ ನೌಕರರಿಗೆ ಬ್ಯಾಂಕ್‌ಗಳಲ್ಲಿ ಸರಿಯಾದ ಸೇವೆ ಸಿಗುತ್ತಿಲ್ಲ. ಬ್ಯಾಂಕ್‌ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಗೊತ್ತಿಲ್ಲ. ಪಿಂಚಣಿದಾರರು ಪಿಂಚಣಿ ಪಡೆಯಲು ಸಾಲಿನಲ್ಲಿ ನಿಲ್ಲಬೇಕಿದೆ. ಈ ತೊಂದರೆ ತಪ್ಪಿಸಲು ಪಿಂಚಣಿದಾರರಿಗೆ ಪ್ರತ್ಯೇಕ ಸೇವಾ ಕೌಂಟರ್‌ ತೆರೆಯಬೇಕು. 70 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಸಾಲ ಸೌಲಭ್ಯವಿಲ್ಲ’ ಎಂದು ಬಂಗಾರಪೇಟೆ ತಾಲ್ಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಪೆರುಮಾಳ್ ಅಸಮಾಧಾನ ವ್ಯಕ್ತಪಡಿಸಿದರು.

‘ಪಿಂಚಣಿದರರ ಕುಂದು ಕೊರತೆ ನಿವಾರಣೆಗೆ ಪಿಂಚಣಿ ಅದಾಲತ್ ಅಗತ್ಯ. ಬ್ಯಾಂಕ್‌ನಿಂದ ಪಿಂಚಣಿದಾರರ ದಾಖಲೆಪತ್ರ ಬಂದಾಗ ವಿಳಂಬ ಮಾಡದೆ ಕಳುಹಿಸಿ ಕೊಡಬೇಕು’ ಎಂದು ಸಹಾಯಕ ಖಜಾನಾಧಿಕಾರಿಗಳಾದ ಜೀವನ್ ಮತ್ತು ಟಿ.ಎಂ.ನಾರಾಯಣರಾವ್ ಕೋರಿದರು.

ಸಹಾಯಕ ಖಜಾನಾಧಿಕಾರಿ ಚೈತ್ರಾ, ಪಿಂಚಣಿದಾರರ ಸಂಘದ ಉಪಾಧ್ಯಕ್ಷ ನಾಗರಾಜ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು, ಪಿಂಚಣಿದಾರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT