ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಹೀ ಸಂಘಟನ್‌: ಲಸಿಕೆ ಅಭಿಯಾನ

ಶ್ಯಾಮ್‌ಪ್ರಸಾದ್‌ ಮುಖರ್ಜಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಹೇಳಿಕೆ
Last Updated 23 ಜೂನ್ 2021, 13:56 IST
ಅಕ್ಷರ ಗಾತ್ರ

ಕೋಲಾರ: ‘ಸೇವಾಹೀ ಸಂಘಟನ್ ಅಡಿಯಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಮತ್ತು ಪರಿಹಾರ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಬಿಜೆಪಿ ವತಿಯಿಂದ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್‌ಪ್ರಸಾದ್‌ ಮುಖರ್ಜಿ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಗೊತ್ತಾಗಿದ್ದು, ಜುಲೈ 6ರವರೆಗೆ ಪ್ರತಿ ಬೂತ್‌ ಮಟ್ಟದಲ್ಲಿ ಸಸಿ ನೆಡುವ ಅಭಿಯಾನ ನಡೆಸಲಾಗುತ್ತದೆ’ ಎಂದು ಹೇಳಿದರು.

‘ಕೆರೆ, ಬಾವಿ ಮತ್ತ ಇತರೆ ಜಲ ಮೂಲಗಳ ಸಂರಕ್ಷಣೆಗೆ ವಿಶೇಷ ಗಮನಹರಿಸಿ ಕ್ಲೀನ್‌ ಇಂಡಿಯಾ, ಹೆಲ್ತಿ ಇಂಡಿಯಾ ಅಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕೈಗೊಳ್ಳಲಾಗುವುದು. ಅಭಿಯಾನದ ಭಾಗವಾಗಿ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರಿನ ಕಲ್ಯಾಣಿ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ’ ಎಂದರು.

‘ಕಾಂಗ್ರೆಸ್ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತ್ತು. ಮಾನವ ಹಕ್ಕುಗಳನ್ನು ಹತ್ತಿಕ್ಕಿದ್ದರಿಂದ ಜನರು ಚಿತ್ರಹಿಂಸೆ ಅನುಭವಿಸಿದರು. ಈ ಕಾರಣಕ್ಕೆ ಜೂನ್‌ 25ರಂದು ಕರಾಳ ದಿನ ಆಚರಿಸಲಾಗುತ್ತಿದೆ. ಕಾಂಗ್ರೆಸ್‌ನ ದಮನಕಾರಿ ನೀತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಮತ್ತು ಮಿಸಾ ಕಾಯ್ದೆಯಡಿ ಬಂಧಿತರಾದವರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ’ ಎಂದು ತಿಳಿಸಿದರು.

ಅಪಪ್ರಚಾರ: ‘ವಿಪಕ್ಷಗಳಿಗೆ ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಯಾವುದೇ ವಿಚಾರವಿಲ್ಲದ ಕಾರಣ ಕೋವಿಡ್‌ ಲಸಿಕೆಯನ್ನು ಮೋದಿ ಲಸಿಕೆ ಎಂದು ಅಪಪ್ರಚಾರ ಮಾಡಿದವು. ಈ ಹಿಂದೆ ಲಸಿಕೆ ಹಾಕಿಸಿಕೊಳ್ಳದವರು ಈಗ ಕೋವಿಡ್‌ಗೆ ಲಸಿಕೆಯೇ ಮದ್ದು ಎಂದು ಹಾಕಿಸಿಕೊಳ್ಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಕೋವಿಡ್‌ ಸಂದರ್ಭದಲ್ಲಿ ವಿಪಕ್ಷಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ. ಬಿಜೆಪಿಯ ಜನಪರ ಕೆಲಸದಿಂದ ಎಚ್ಚೆತ್ತುಕೊಂಡ ಪ್ರತಿಪಕ್ಷಗಳು ಐಸಿಯುನಿಂದ ವೆಂಟಿಲೇಟರ್‌ಗೆ ಬಂದವು. ಕೋವಿಡ್ ಕಾರಣಕ್ಕೆ ಒಂದೂವರೆ ವರ್ಷದಿಂದ ದೇಶದ ಬೊಕ್ಕಸಕ್ಕೆ ಸರಿಯಾಗಿ ಆದಾಯ ಬಾರದಿದ್ದರೂ ಮೋದಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದ ಸಿದ್ಧತೆ: ‘ಕೋವಿಡ್‌ 3ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವುದರಿಂದ ಸರ್ಕಾರ ಪರಿಸ್ಥಿತಿ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಕ್ಕಳ ಚಿಕಿತ್ಸೆಗೆ ತಜ್ಞ ವೈದ್ಯರ ಕೊರತೆ ಇರುವುದರಿಂದ ಎಂಬಿಬಿಎಸ್ ಮಾಡಿರುವ ವೈದ್ಯರಿಗೆ ತರಬೇತಿ ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆ ಹಾಗೂ ಹಳ್ಳಿಗಳಲ್ಲಿ ಯುವಕರು, ಮಹಿಳಾ ಕಾರ್ಯಕರ್ತೆಯರು ಸೇರಿ 2 ಲಕ್ಷ ಜನರಿಗೆ ತರಬೇತಿ ನೀಡಲು ಪಕ್ಷ ಉದ್ದೇಶಿಸಿದೆ’ ಎಂದುವಿವರಿಸಿದರು.

‘ಪಕ್ಷದ ರಾಜ್ಯ ಘಟಕವು ಜಿಲ್ಲೆ ಮತ್ತು ಮಂಡಲ ಮಟ್ಟದಲ್ಲಿ 3 ಸದಸ್ಯರ ತಂಡ ನೇಮಕ ಮಾಡಲಿದೆ. ಸ್ವಯಂ ಸೇವಕರಿಗೆ ಪಕ್ಷದ ಕೇಂದ್ರ ಘಟಕ ತರಬೇತಿ ಮಾದರಿಯನ್ನು ರೂಪಿಸಿ ರಾಜ್ಯ, ಜಿಲ್ಲಾ ಮತ್ತು ದೈಹಿಕವಾಗಿ ಮಂಡಲ ಮಟ್ಟದಲ್ಲಿ ನಡೆಸಲಾಗುತ್ತದೆ. ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ವೈದ್ಯಕೀಯ ಪರಿಕರ ಸಂಗ್ರಹಿಸಿ ಅಗತ್ಯವಿದ್ದಲ್ಲಿ ಆರೋಗ್ಯ ಸ್ವಯಂ ಸೇವಕರ ಮೂಲಕ ಸೇವೆ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT