ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಫ್‌ಸಿಎಸ್‌: ಠೇವಣಿ ಸಂಗ್ರಹಕ್ಕೆ ನಿರ್ಣಯ

ಬ್ಯಾಂಕ್‌ನ ಘನತೆ ಹೆಚ್ಚಿಸಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ
Last Updated 24 ಡಿಸೆಂಬರ್ 2019, 16:15 IST
ಅಕ್ಷರ ಗಾತ್ರ

ಕೋಲಾರ: ಪ್ರತಿ ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದಿಂದ (ಎಸ್‌ಎಫ್‌ಸಿಎಸ್‌) ತಲಾ ₹ 2 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಲು ಇಲ್ಲಿ ಮಂಗಳವಾರ ನಡೆದ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

₹ 2 ಕೋಟಿಯ ಗುರಿಯನ್ನು ಮೀರಿ ಹೆಚ್ಚಿನ ಠೇವಣಿ ಸಂಗ್ರಹಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ ಎಂದು ಸಂಘಗಳ ಕಾರ್ಯದರ್ಶಿಗಳು ಪ್ರಕಟಿಸಿದರು.

ಸಭೆಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ‘ಬ್ಯಾಂಕ್ ಪುನಶ್ಚೇತನಗೊಂಡು ದೇಶಕ್ಕೆ ಮಾದರಿಯಾಗಿದೆ. ಈ ಬಗ್ಗೆ ಸಾಕ್ಷ್ಯಾಚಿತ್ರ ಸಿದ್ಧಪಡಿಸಲು ನಬಾರ್ಡ್ ಮುಂದಾಗಿದೆ. ಸಂಘಗಳು ಕನಿಷ್ಠ ₹ 200 ಕೋಟಿ ಠೇವಣಿ ಸಂಗ್ರಹಿಸಿ ಬ್ಯಾಂಕ್‌ನ ಘನತೆ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

‘ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಎಂಬುದು ಇತಿಹಾಸ ಮಾತ್ರ. ನೂತನ ಆಡಳಿತ ಮಂಡಳಿಯು ಬ್ಯಾಂಕಿಂಗ್‌ ವ್ಯವಸ್ಥೆಯ ಪ್ರತಿ ವಿಭಾಗದಲ್ಲೂ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವಂತೆ ಸಾಧನೆ ಮಾಡಿದೆ. ಆದರೆ, ಠೇವಣಿ ಸಂಗ್ರಹದಲ್ಲಿ ಬ್ಯಾಂಕ್‌ ಹಿಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 120 ಸೊಸೈಟಿಗಳು ಶಕ್ತಿಯುತವಾಗಿದ್ದು, ಸಿಇಒಗಳು ಸ್ವಯಂಪ್ರೇರಿತರಾಗಿ ಠೇವಣಿ ಸಂಗ್ರಹಿಸಬೇಕು. 2020ರ ಮಾರ್ಚ್ ಅಂತ್ಯದೊಳಗೆ ₹ 500 ಕೋಟಿ ಠೇವಣಿ ಸಂಗ್ರಹವಾಗಬೇಕು. ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡಿದರೆ ಎಲ್ಲವೂ ಸುಲಭವಾಗುತ್ತದೆ’ ಎಂದು ಸಲಹೆ ನೀಡಿದರು.

‘ಬ್ಯಾಂಕ್ ಆಡಳಿತ ಮಂಡಳಿ ₹ 50 ಕೋಟಿ ಠೇವಣಿ ಸಂಗ್ರಹದ ಗುರಿ ಇಟ್ಟುಕೊಂಡಿದ್ದು, ಬ್ಯಾಂಕ್ ವ್ಯವಸ್ಥಾಪಕರು ₹ 20 ಕೋಟಿ ಇಡಬೇಕು. ಉಳಿದ ₹ 200 ಕೋಟಿಯನ್ನು ಸೊಸೈಟಿಗಳು ಭರ್ತಿ ಮಾಡಬೇಕು’ ಎಂದು ಮನವಿ ಮಾಡಿದರು.

ಸ್ತ್ರೀಶಕ್ತಿ ಸಂಘ: ‘ತಾಲ್ಲೂಕು ಸೊಸೈಟಿಗಳಿಂದ ಕನಿಷ್ಠ ₹ 25 ಕೋಟಿ ಠೇವಣಿ ಸಂಗ್ರಹಿಸುವ ಗುರಿಯಿದೆ. ಶ್ರೀನಿವಾಸಪುರದಲ್ಲಿ ₹ 10 ಕೋಟಿ ಸಂಗ್ರಹಿಸಬೇಕು. ಸ್ತ್ರೀಶಕ್ತಿ ಸಂಘಗಳನ್ನು ರಚಿಸುವ ಮೂಲಕ ಸುಲಭವಾಗಿ ಠೇವಣಿ ಸಂಗ್ರಹಿಸಬಹುದು. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಇನ್ನೂ ಸ್ತ್ರೀಶಕ್ತಿ ಸಂಘಗಳು ರಚನೆಯಾಗದ ಕಾರಣ ಸೊಸೈಟಿಗಳು ಇದರ ಸದುಪಯೋಗ ಪಡೆಯಬೇಕು’ ಎಂದು ಸೂಚಿಸಿದರು.

‘ಸೊಸೈಟಿ ಸಿಬ್ಬಂದಿಗೆ ಆರೋಗ್ಯ ವಿಮೆ ಒದಗಿಸಲು ಬ್ಯಾಂಕ್ ಬದ್ಧವಾಗಿದೆ. ಆದರೆ, ಬಹುತೇಕ ನೌಕರರು ಅಗತ್ಯ ದಾಖಲೆಪತ್ರ ಒದಗಿಸದ ಕಾರಣ ಯೋಜನೆ ಜಾರಿಗೆ ವಿಳಂಬವಾಗಿದೆ. ಸಿಬ್ಬಂದಿ ಇನ್ನಾದರೂ ಎಚ್ಚೆತ್ತುಕೊಂಡು ದಾಖಲೆಪತ್ರ ಕೊಟ್ಟರೆ 2020ರ ಫೆಬ್ರುವರಿ ತಿಂಗಳಲ್ಲಿ ₹ 3 ಲಕ್ಷ ಆರೋಗ್ಯ ಕಾರ್ಡ್ ಒದಗಿಸುತ್ತೇವೆ’ ಎಂದು ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್‌, ನಿರ್ದೇಶಕರಾದ ಹನುಮಂತರೆಡ್ಡಿ, ಎನ್.ಸೋಮಶೇಖರ್, ಕೆ.ವಿ.ದಯಾನಂದ್, ಎಂ.ಎಲ್.ಅನಿಲ್‌ಕುಮಾರ್, ಸೊಣ್ಣೇಗೌಡ, ಎಚ್.ನರಸಿಂಹರೆಡ್ಡಿ, ಆರ್.ನಾರಾಯಣರೆಡ್ಡಿ, ಕೆ.ಎಚ್.ಚನ್ನರಾಯಪ್ಪ, ಬಿ.ವಿ.ವೆಂಕಟರೆಡ್ಡಿ, ಮೋಹನ್‌ರೆಡ್ಡಿ, ಎನ್.ನಾಗಿರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT