ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 5ಕ್ಕೆ ಶರಣ ಸಂಸ್ಕೃತಿ ಉತ್ಸವ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿಕೆ
Last Updated 29 ಫೆಬ್ರುವರಿ 2020, 13:50 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಾರ್ಚ್‌ 5ರಂದು ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಉತ್ಸವ ನಡೆಸಲಾಗುತ್ತಿದೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ವಚನಕಾರರ ವಿಚಾರಧಾರೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ಉತ್ಸವದ ಉದ್ದೇಶ’ ಎಂದರು.

‘ಶರಣಪ್ಪ ಮಾಗನೂರು ಬಸಪ್ಪ ಪ್ರತಿಷ್ಠಾನವು ಪರಿಷತ್ತಿಗೆ ನೀಡಿರುವ ₹ 1 ಲಕ್ಷದಲ್ಲಿ ದತ್ತಿ ಸ್ಥಾಪಿಸಲಾಗಿದ್ದು, ವಚನ ಹಾಗೂ ಶರಣ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದವರನ್ನು ಪ್ರತಿ ವರ್ಷ ದತ್ತಿಯ ಬಡ್ಡಿ ಹಣದಲ್ಲಿ ಗೌರವಿಸಲಾಗುವುದು. 2019ನೇ ಸಾಲಿಗೆ ಆರೂಢ ದಾಸೋಹಿ ಮಹಾಶರಣ ಮಾಗನೂರು ಬಸಪ್ಪ ಗೌರವ ಸಮರ್ಪಣೆಗೆ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಎನ್.ಆರ್.ಜ್ಞಾನಮೂರ್ತಿ ಭಾಜನರಾಗಿದ್ದಾರೆ’ ಎಂದು ಪ್ರಕಟಿಸಿದರು.

‘ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಉತ್ಸವ ಉದ್ಘಾಟಿಸುತ್ತಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮುಖ್ಯ ಸಲಹೆಗಾರ ಗೊ.ರು.ಚನ್ನಬಸಪ್ಪ ಭಾಷಣ ಮಾಡುತ್ತಾರೆ. ಜಿಲ್ಲೆಯ ಹಲವು ಸಂಶೋಧಕರಿಗೆ ಗೌರವ ಸಮರ್ಪಣೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಹಿಂದೆ ಶರಣ ಶರಣೆಯರು ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯುವ ಕಾಯಕ ಮಾಡಿದ್ದರು. ವಿದ್ಯಾರ್ಥಿಗಳು ವಚನಗಳ ಮಹತ್ವ ತಿಳಿಯಬೇಕು. ಜಾತಿ ಮುಖ್ಯವಲ್ಲ, ಬದಲಿಗೆ ಅರ್ಹತೆ, ಯೋಗ್ಯತೆ ಮುಖ್ಯ ಎಂಬುದನ್ನು ತಿಳಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

ವಿಚಾರ ಸಂಕಿರಣ: ‘ಉತ್ಸವದ ಮೊದಲ ದಿನ ಶರಣ ಸಾಹಿತ್ಯ ಧಾತು ಮತ್ತು ಧೋರಣೆಗಳು ಕುರಿತು ವಿಚಾರ ಸಂಕಿರಣ ನಡೆಯಲಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ದಿವಂಗತ ವಿ.ನಾಗರಾಜ ಅವರಿಗೆ ನುಡಿ ನಮನ ಸಲ್ಲಿಸಲಾಗುವುದು’ ಎಂದು ವಿವರಿಸಿದರು.

‘ಅದೇ ದಿನ ಮಧ್ಯಾಹ್ನ ಕವಿಗೋಷ್ಠಿ ನಡೆಯಲಿದೆ. ನಂತರ ಸಂಜೆ ಉತ್ಸವದ ಸಮಾರೋಪ ಸಮಾರಂಭ ನಡೆಯುತ್ತದೆ. ಉಪ ವಿಭಾಗಾಧಿಕಾರಿ ಸಿ.ಸೋಮಶೇಖರ್ ಸಮಾರೋಪ ಭಾಷಣ ಮಾಡುತ್ತಾರೆ. ರಂಗಭೂಮಿ ಕಲಾವಿದೆ ಬಿ.ಜಯಶ್ರೀ ನಿರ್ದೇಶನದ ‘ನೀವು ಕಾಣಿರೇ’ ನಾಟಕ ಪ್ರದರ್ಶನ ರಾತ್ರಿ ನಡೆಯುತ್ತದೆ’ ಎಂದು ವಿವರಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿಗಳಾದ ಆರ್.ಅಶ್ವತ್ಥ್‌, ಆರ್.ಎಂ.ವೆಂಕಟಸ್ವಾಮಿ, ಪ್ರಧಾನ ಸಂಚಾಲಕ ಎಂ.ಪಿ.ನಾರಾಯಣಸ್ವಾಮಿ, ನಗರ ಘಟಕದ ಅಧ್ಯಕ್ಷ ಬಿ.ಶಿವಕುಮಾರ್, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಕೆ.ಎನ್. ಪರಮೇಶ್ವರನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT