ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಶಿವಾರ ಪಟ್ಟಣದ ಶಿಲ್ಪಿಗಳಿವರು...

ಪಾರಂಪರಿಕ ಶಿಲ್ಪ ಗ್ರಾಮವಾಗಿ ಹೆಸರುವಾಸಿ; ಕಲೆಯನ್ನು ಜಗತ್ತಿಗೆ ಪಸರಿಸುತ್ತಿದೆ ಈ ಪುಟ್ಟ ಗ್ರಾಮ
Last Updated 11 ಜುಲೈ 2020, 16:40 IST
ಅಕ್ಷರ ಗಾತ್ರ

ಮಾಲೂರು: ಶಿಲ್ಪಕಲೆಯ ವೈಭವವನ್ನು ಜಗತ್ತಿಗೆ ಸಾರುತ್ತಿರುವ ಶಿವಾರ ಪಟ್ಟಣದ ಶಿಲ್ಪಿಗಳು ರಾಜ್ಯದ ಹೆಸರಾಂತ ದೇಗುಲಗಳಲ್ಲಿರುವ ನೂರಾರು ಸುಂದರ ವಿಗ್ರಹಗಳಿಗೆ ಜೀವ ತುಂಬಿದ್ದಾರೆ.

ಇಲ್ಲಿನ ಪ್ರತಿ ಮನೆಗಳ ಮುಂಭಾಗದಲ್ಲಿ ಕಲ್ಲುಗಳ ರಾಶಿ ಎದ್ದು ಕಾಣುತ್ತದೆ. ಸಮಾನ್ಯರಿಗೆ ಇದು ಕಲ್ಲು ಬಂಡೆಗಳು. ಆದರೆ, ಶಿಲ್ಪ ಕಲಾವಿದರಿಗೆ ಅದುವೇ ಸ್ಫೂರ್ತಿಯ ಸೆಲೆ.

ತಾಲ್ಲೂಕಿನಿಂದ 15 ಕಿ.ಮೀ. ದೂರದಲ್ಲಿರುವ ಶಿಲ್ಪಗ್ರಾಮ ಎಂದು ಹೆಸರಾಗಿರುವ ಶಿವಾರ ಪಟ್ಟಣ ಗ್ರಾಮದಲ್ಲಿ ಯಾವ ಕಡೆಗೆ ನೋಡಿದರೂ ವಿಗ್ರಹಗಳು, ಕೆತ್ತನೆಯಲ್ಲಿ ನಿರತ ಶಿಲ್ಪಿಗಳೇ ಕಾಣುತ್ತಾರೆ. ಗ್ರಾಮವನ್ನು ಪ್ರವೇಶಿಸುವಾಗ ರಸ್ತೆ ಬದಿಯಲ್ಲಿ ಟಾರ್ಪಲ್‌ ಹಾಸಿದ, ತೆಂಗಿನ ಗರಿಗಳಿಂದ ನಿರ್ವಿುಸಿದ ಶೆಡ್ಗಳು ಇಣುಕಲಾರಂಭಿಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿನ ಮನೆಗಳ ಮುಂಭಾಗದ ಚಾವಡಿಗಳಲ್ಲಿ ಕಟೆದು ಪೂರ್ಣಗೊಳಿಸಿರುವ, ಅರ್ಧಂಬರ್ಧ ಕೆತ್ತನೆ ಕೆಲಸ ಮುಗಿದಿರುವ ಮೂರ್ತಿಗಳು ಸ್ವಾಗತಿಸುತ್ತವೆ.

ಥಾಯ್ಲೆಂಡ್ ದೇಶಕ್ಕೆ ಹೋಗುವ ಆರು ಅಡಿ ಎತ್ತರದ ಅನಂತಪದ್ಮನಾಭ ದೇವರ ವಿಗ್ರಹ ನೋಡುಗರ ಮನಸೆಳೆಯುತ್ತಿದೆ. ಗಣಪತಿ, ಲಕ್ಷ್ಮಿ, ವೆಂಕಟೇಶ್ವರ, ಶ್ರೀರಾಮ, ಲಕ್ಷ್ಮಣ, ಶ್ರೀಕೃಷ್ಣ, ಸಾಯಿಬಾಬಾ, ಸಂಗೊಳ್ಳಿ ರಾಯಣ್ಣ, ಕನಕದಾಸ ಮೊದಲಾದ ದಾಸಾವರೇಣ್ಯರು, ನಂದಿ, ಆನೆ, ದೇವಸ್ಥಾನದ ಧ್ವಜಸ್ತಂಭಗಳು ಕಣ್ಮನ ಸೆಳೆಯುತ್ತವೆ. ದೇವದೇವತೆಯರ ವಿಗ್ರಹಗಳು ಎಲ್ಲೆಂದರಲ್ಲಿ ಕಂಡು ಬರುವುದರಿಂದ ಈ ಗ್ರಾಮದ ಕುರಿತು ಭಕ್ತಿ, ಗೌರವದ ಭಾವನೆ ಮೂಡುತ್ತದೆ.

ಶುದ್ಧಾಚಾರದ ದುಡಿಮೆಯ ಜೀವನ: ಸ್ಥಳೀಯವಾಗಿ ಹೆಚ್ಚಿನ ಜನರು ಕೆತ್ತನೆ ಕೆಲಸದ ಅನುಭವ ಹೊಂದಿರುವುದರಿಂದ ಅವರನ್ನೇ ದಿನಗೂಲಿ ಆಧಾರದಲ್ಲಿ ಕೆಲಸಕ್ಕೆ ನೇಮಿಸಿ ಕೊಳ್ಳುತ್ತಾರೆ. ಸೂಕ್ಷ್ಮ ಕೆತ್ತನೆಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಕುಸುರಿ ಕೆಲಸಗಳು ಹೆಚ್ಚಿದ್ದಷ್ಟು ನಿಪುಣ ಕೆಲಸಗಾರರನ್ನು ಬಳಸಿಕೊಳ್ಳುತ್ತಾರೆ.

ಫಾಲಿಷಿಂಗ್, ವಿನ್ಯಾಸ, ಆಂಬರಿಂಗ್ ಮುಂತಾದ ಕೆಲಸಗಳಿಗೆ ಹಂತಹಂತವಾಗಿ ಬೇರೆ ಬೇರೆ ತಂಡಗಳಾಗಿ ಕೆಲಸ ಮಾಡುತ್ತಾರೆ. ಕಲ್ಲಿನ ವಿಗ್ರಹಗಳು, ಗರುಡಕಂಬ, ಬೆಳ್ಳಿಯ ಮುಖವಾಡ, ಪ್ರಭಾವಳಿ, ದ್ವಾರ, ದೇವರ ಪೀಠ, ಪಂಚಲೋಹ, ಬೆಳ್ಳಿಯ ವಿಗ್ರಹಗಳ ತಯಾರಿ– ಹೀಗೆ ಬೇಡಿಕೆ ಬಂದ ಮೂರ್ತಿಗಳನ್ನು ಮಾಡಿಕೊಡುತ್ತಾರೆ.

ಇಲ್ಲಿನ ಶಿಲ್ಪಿಗಳು ಮೂರ್ತಿ ತಯಾರಿಸುವ ದಿನಗಳಲ್ಲಿ ಮಾಂಸಾಹಾರವನ್ನು ಸೇವಿಸು ವುದಿಲ್ಲ. ಮೂರ್ತಿ ತಯಾರಿಸುವ ಕೊಠಡಿ ಯೊಳಗೆ ಕಾಲಿಗೆ ಚಪ್ಪಲಿ ಧರಸಿ ಹೋಗುವುದಿಲ್ಲ. ತಯಾರಿಸಿದ ಮೂರ್ತಿಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಮಾರಾಟ ಮಾಡುವಂತಿಲ್ಲ. ಪೂಜೆ ಮಾಡಿ ಕಾಯ್ದಿರಿಸಿದವರಿಗೆ ಮೂರ್ತಿ ನೀಡಬೇಕೆಂಬ ಸಂಪ್ರದಾಯ ಇದೆ.

ಕುಟುಂಬಗಳ ಪಾರಂಪರಿಕ ಕಸುಬು: ಈ ಗ್ರಾಮದಲ್ಲಿ ಜಾತಿ, ಮತ, ಭೇದ ಎನ್ನದೆ ಎಲ್ಲ ಸಮುದಾಯದವರು ಕೆತ್ತನೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಶಿಲ್ಪಿಗಳ ಮಕ್ಕಳಿಗೂ ಈ ವಿದ್ಯೆ ರಕ್ತಗತವಾಗಿದೆ. ಗ್ರಾಮದ ಸುಮಾರು ನಾನೂರಕ್ಕೂ ಹೆಚ್ಚು ಕುಟುಂಬಗಳಿಗೆ ಶಿಲ್ಪ ಕಲಾಕೃತಿಗಳನ್ನು ರಚಿಸುವುದೇ ಮುಖ್ಯ ಕಾಯಕವಾಗಿದೆ.

ಐದಾರು ತಲೆಮಾರುಗಳಿಂದ ಶಿಲ್ಪ ಕಲೆಯಲ್ಲಿ ತೊಡಗಿಕೊಂಡಿರುವ ವಿಶ್ವಕರ್ಮ ಸಮುದಾಯದ ಶಿಲ್ಪಿಗಳಿಗೆ ಸಹಾಯಕರಾಗಿ ತಿಗಳ, ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಅಲ್ಪ ಸಂಖ್ಯಾತರು ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT