ಕೋಲಾರ: ಜಿಲ್ಲೆಯಲ್ಲಿ ಮಹಾ ಶಿವರಾತ್ರಿ ಸಂಭ್ರಮ

ಶನಿವಾರ, ಮಾರ್ಚ್ 23, 2019
21 °C
ದೇವಾಲಯಗಳಿಗೆ ಹರಿದು ಬಂದ ಭಕ್ತ ಸಾಗರ: ಉಪವಾಸ ವ್ರತಾಚರಣೆ

ಕೋಲಾರ: ಜಿಲ್ಲೆಯಲ್ಲಿ ಮಹಾ ಶಿವರಾತ್ರಿ ಸಂಭ್ರಮ

Published:
Updated:
Prajavani

ಕೋಲಾರ: ಜಿಲ್ಲೆಯಾದ್ಯಂತ ಸೋಮವಾರ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿತು. ನಗರ ಸೇರಿದಂತೆ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಲಾಯಿತು.

ಮಹಿಳೆಯರು ಮನೆ ಮುಂದೆ ನಸುಕಿನಲ್ಲೇ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಅಂಗಳವನ್ನು ಚಿತ್ತಾರಗೊಳಿಸಿದ್ದರು. ಮನೆಯ ಬಾಗಿಲಿಗೆ ತಳಿರು ತೋರಣ ಕಟ್ಟಿ ಹೂವುಗಳಿಂದ ಸಿಂಗರಿಸಲಾಗಿತ್ತು.

ಶಿವಾಲಯಗಳಲ್ಲಿ ಇಡೀ ದಿನ ಶಿವನಾಮ ಸ್ಮರಣೆ, ಅಖಂಡ ಭಜನೆ ನಡೆಯಿತು. ಅಲ್ಲದೇ, ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ, ಯಾಮ ಪೂಜೆ ನಡೆದವು. ದೇವಾಲಯಗಳನ್ನು ತೋರಣದಿಂದ ಸಿಂಗರಿಸಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಪುರಾಣ ಪ್ರಸಿದ್ಧ ಶತಶೃಂಗ ಪರ್ವತ ಶ್ರೇಣಿಯ ಅಂತರಗಂಗೆ ಬೆಟ್ಟದ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು ನಸುಕಿನಲ್ಲೇ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲಿರುವ ಕಲ್ಲಿನ ಬಸವ ಮೂರ್ತಿಯ ಬಾಯಿಂದ ಬರುವ ಪವಿತ್ರ ಗಂಗೆಗೆ ಭಕ್ತರು ಮುಗಿಬಿದ್ದರು.

ಕಾಳಮ್ಮಗುಡಿ ಬೀದಿಯಲ್ಲಿನ ಕಾಳಿಕಾಂಭ ಕಮಟೇಶ್ವರ ದೇವಾಲಯ, ಗೌರಿಪೇಟೆಯ ಬಯಲು ಬಸವೇಶ್ವರ ದೇವಾಲಯ, ಅರಳೆಪೇಟೆಯ ಬಸವೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಬಿಲ್ವಾರ್ಚನೆ ನೆರವೇರಿತು.

ಕೋಟೆ ಬಡಾವಣೆಯಲ್ಲಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿತು. ದೇವಾಲಯ ಆವರಣದ ನಂದಿ ವಿಗ್ರಹದ ಮುಂಭಾಗದಲ್ಲಿ ಭಕ್ತರು ದೀಪ ಬೆಳಗಿ ಹಣ್ಣು ಕಾಯಿ ಇಟ್ಟು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಬಳಿಕ ಶಿವಲಿಂಗ ದರ್ಶನದೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು. ಮನೆಗಳಲ್ಲಿ ಹಿರಿಯರು ಉಪವಾಸ ವ್ರತ ಆಚರಿಸಿ ದೇವರಿಗೆ ರಾಗಿ, ಜೋಳ ಹಾಗೂ ಸಾಮೆ ಪುರಿಯಿಂದ ಸಿದ್ಧಪಡಿಸಿದ ಉಂಡೆಗಳನ್ನು ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು.

ಸೂರ್ಯ ಕಿರಣ ಸ್ಪರ್ಶ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಿರುವಾರ ಗ್ರಾಮದ ಈಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಕ್ರಮ ನಡೆದವು. ಶಿವರಾತ್ರಿಯ ಮಾರನೇ ದಿನವಾದ ಪಾರಣೆಯಂದು ಸೂರ್ಯ ಕಿರಣಗಳು ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವರ ಮೂರ್ತಿಯನ್ನು ಸ್ಪರ್ಶಿಸಲಿದ್ದು, ಈ ಚಮತ್ಕಾರದ ವೀಕ್ಷಣೆಗೆ ದೇವಾಲಯದಲ್ಲಿ ಸಿದ್ಧತೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !