ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ರೋಗಗ್ರಸ್ತ ಜಿಲ್ಲಾ ಆಸ್ಪತ್ರೆ: ಸೋಂಕಿತರ ನರಕಯಾತನೆ

ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಕುರುಡು ಕಾಂಚಾಣದ ಸದ್ದು: ಹೆಚ್ಚಿದ ದಲ್ಲಾಳಿಗಳ ಹಾವಳಿ
Last Updated 2 ಮೇ 2021, 19:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯು ರೋಗಗ್ರಸ್ತವಾಗಿದ್ದು, ಕೊರೊನಾ ಸೋಂಕಿತರು ನರಕಯಾತನೆ ಅನುಭವಿಸುವಂತಾಗಿದೆ.

ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್‌ ಅವರಿಂದ 1937ರಲ್ಲಿ ಲೋಕಾರ್ಪಣೆಯಾದ ಈ ಆಸ್ಪತ್ರೆಯು 84 ವರ್ಷಗಳ ಭವ್ಯ ಇತಿಹಾಸ ಹೊಂದಿದೆ. ಒಂದು ಕಾಲಕ್ಕೆ ಸರ್ಕಾರಿ ಆಸ್ಪತ್ರೆಗಳಂತೆಯೇ ಹದಗೆಟ್ಟಿದ್ದ ಈ ಆಸ್ಪತ್ರೆಯು ಕಳೆದ ಮೂರ್‌್ನಾಲ್ಕು ವರ್ಷದಲ್ಲಿ ಸಾಕಷ್ಟು ಸುಧಾರಣೆ ಕಂಡಿತ್ತು.

ನಗರ ಹಾಗೂ ಜಿಲ್ಲೆಯ ರೋಗಿಗಳು ಖಾಸಗಿ ಆಸ್ಪತ್ರೆಗಳ ಬದಲಿಗೆ ಎಸ್‌ಎನ್‌ಆರ್‌ ಆಸ್ಪತ್ರೆಯತ್ತ ಮುಖ ಮಾಡಿದ್ದರು. ಜತೆಗೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದಲೂ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬರುತ್ತಿದ್ದರು. ಕೋವಿಡ್‌ ಮೊದಲನೇ ಅಲೆ ಸಂದರ್ಭದಲ್ಲಿ ಜಿಲ್ಲಾಡಳಿತವು ಈ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿತ್ತು.

ಆಸ್ಪತ್ರೆಯು ಕೋವಿಡ್‌ ಮೊದಲನೇ ಅಲೆಯಲ್ಲಿ ಕೊರೊನಾ ಸೋಂಕಿತರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿತ್ತು. ಆದರೆ, ಈಗ ಆಸ್ಪತ್ರೆಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಆಸ್ಪತ್ರೆಯಲ್ಲಿ ದಲ್ಲಾಳಿಗಳ ಹಾವಳಿ ಜೋರಾಗಿದ್ದು, ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ದುಡ್ಡು ಕೊಟ್ಟರಷ್ಟೇ ಬೆಡ್‌ ಮತ್ತು ವೈದ್ಯಕೀಯ ಆಮ್ಲಜನಕ ಸೌಲಭ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪರಿಸ್ಥಿತಿ ಗಂಭೀರವಾಗುತ್ತಿದ್ದು, ವೈದ್ಯಕೀಯ ಆಮ್ಲಜನಕ ಮತ್ತು ತೀವ್ರ ನಿಗಾ ಘಟಕದಲ್ಲಿನ (ಐಸಿಯು) ಬೆಡ್‌ಗಳಿಗೆ ಬೇಡಿಕೆ ಹೆಚ್ಚಿದೆ. ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿನ ದಲ್ಲಾಳಿಗಳು ಪರಿಸ್ಥಿತಿಯ ಲಾಭ ಪಡೆದು ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಈ ದಂಧೆಗೆ ಆಸ್ಪತ್ರೆಯ ಕೆಲ ವೈದ್ಯಕೀಯ ಸಿಬ್ಬಂದಿಯು ಕೈಜೋಡಿಸಿದ್ದು, ಕೊರೊನಾ ಸೋಂಕಿತರು ವೈದ್ಯಕೀಯ ಆಮ್ಲಜನಕದ ಸಂಪರ್ಕವುಳ್ಳ ಐಸಿಯು ಬೆಡ್‌ಗೆ ಅಂಗಲಾಚುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಸೋಂಕಿತರು ಚಿಕಿತ್ಸೆಗಾಗಿ ಎಸ್‌ಎನ್‌ಆರ್‌ ಆಸ್ಪತ್ರೆಗೆ ಬಂದರೆ ವೈದ್ಯರು ಐಸಿಯು ಬೆಡ್‌ ಇಲ್ಲವೆಂಬ ನೆಪ ಹೇಳುವುದು ಸಾಮಾನ್ಯವಾಗಿದೆ. ಬೆಡ್‌ನ ನಿರೀಕ್ಷೆಯಲ್ಲಿರುವ ಸೋಂಕಿತರನ್ನು ಗುರಿಯಾಗಿಸಿಕೊಂಡು ಅಖಾಡಕ್ಕಿಳಿಯುವ ದಲ್ಲಾಳಿಗಳು ₹ 10 ಸಾವಿರದಿಂದ ₹ 20 ಸಾವಿರದವರೆಗೆ ಹಣ ಪಡೆದು ಐಸಿಯು ಬೆಡ್‌ನ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಹಣದಲ್ಲಿ ಆಸ್ಪತ್ರೆಯ ಕೆಲ ವೈದ್ಯಕೀಯ ಸಿಬ್ಬಂದಿಗೆ ಪಾಲು ಹೋಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬದಲಾಗದ ಪರಿಸ್ಥಿತಿ: ಒಟ್ಟಾರೆ 500 ಹಾಸಿಗೆ ಸಾಮರ್ಥ್ಯದ ಎಸ್‌ಎನ್ಆರ್‌ ಆಸ್ಪತ್ರೆಯಲ್ಲಿ 200 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಕೋವಿಡ್‌ ವಿಭಾಗದ ತೀವ್ರ ನಿಗಾ ಘಟಕದಲ್ಲಿ (ಐಸಿಯು) 40 ಹಾಸಿಗೆಗಳಿವೆ. ಇದರಲ್ಲಿ ಬೆರಳೆಣಿಕೆ ಹಾಸಿಗೆಗಳಿಗೆ ವೆಂಟಿಲೇಟರ್‌ ಮತ್ತು ವೈದ್ಯಕೀಯ ಆಕ್ಸಿಜನ್‌ ಸೌಲಭ್ಯ ಕಲ್ಪಿಸಲಾಗಿದೆ.

ಆಸ್ಪತ್ರೆಯ ಐಸಿಯು ಬೆಡ್‌ಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯಲ್ಲಿ ಆದ ಲೋಪದಿಂದ ಕಳೆದ ವಾರ 5 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದರು. ಈ ಸಂಬಂಧ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಸ್ಥಾನಿಕ ವೈದ್ಯಾಧಿಕಾರಿಯನ್ನು ಸರ್ಕಾರ ಅಮಾನತು ಮಾಡಿತ್ತು.

ಸೋಂಕಿತರ ಸಾವಿನ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಖುದ್ದು ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆಯ ಸುಧಾರಣೆಗೆ ಖಡಕ್‌ ಸೂಚನೆ ನೀಡಿದ್ದರು. ಆದರೂ ಪರಿಸ್ಥಿತಿ ಬದಲಾಗಿಲ್ಲ. ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಸೂಚನೆಗೂ ಜಗ್ಗದ ವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯದ ಚಾಳಿ ಮುಂದುವರಿಸಿದ್ದಾರೆ.

ಕಾಳಸಂತೆಯಲ್ಲಿ ರೆಮ್‌ಡಿಸಿವರ್‌: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಎಸ್‌ಎನ್‌ಆರ್‌ ಆಸ್ಪತ್ರೆಗೆ ಪೂರೈಕೆಯಾಗುತ್ತಿರುವ ರೆಮ್‌ಡಿಸಿವರ್‌ ಚುಚ್ಚುಮದ್ದನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಕೋವಿಡ್‌ ವಾರ್ಡ್‌ನ ವೈದ್ಯಕೀಯ ಸಿಬ್ಬಂದಿಯು ಸೋಂಕಿತರಿಗೆ ರೆಮ್‌ಡಿಸಿವರ್‌ ಚುಚ್ಚುಮದ್ದು ಕೊಟ್ಟಿರುವುದಾಗಿ ದಾಖಲೆಪತ್ರ ಸೃಷ್ಟಿಸಿ ಹೊರಗೆ ಸಾಗಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಒಂದು ಅಥವಾ ಎರಡು ಡೋಸ್‌ ರೆಮ್‌ಡಿಸಿವರ್‌ ಚುಚ್ಚುಮದ್ದು ಕೊಡುವ ನರ್ಸ್‌ಗಳು ಮೂರ್ನಾಲ್ಕು ಡೋಸ್‌ ನೀಡಿರುವುದಾಗಿ ಸೋಂಕಿತರಿಂದ ಕೇಸ್‌ ಶೀಟ್‌ಗೆ ಸಹಿ ಪಡೆದು ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ನರ್ಸ್‌ಗಳು ಹೈಕೋರ್ಟ್ ವಕೀಲರೊಬ್ಬರ ಸೋಂಕಿತ ತಾಯಿಗೆ ಚುಚ್ಚುಮದ್ದು ಕೊಟ್ಟಿರುವುದಾಗಿ ಕೇಸ್‌ ಶೀಟ್‌ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾರೆ ಎಂದು ಗೊತ್ತಾಗಿದೆ. ರೆಮ್‌ಡಿಸಿವರ್‌ ಚುಚ್ಚುಮದ್ದನ್ನು ಕದ್ದುಮುಚ್ಚಿ ಆಸ್ಪತ್ರೆಯಿಂದ ಹೊರಗೆ ಸಾಗಿಸುತ್ತಿರುವ ವಿಚಾರವಾಗಿ ಪೊಲೀಸ್‌ ಠಾಣೆಗೂ ದೂರು ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT