ಭಾನುವಾರ, ನವೆಂಬರ್ 17, 2019
24 °C
ಬೆಂಗಳೂರು ಉತ್ತರ ವಿ.ವಿ ಕುಲಸಚಿವ ಶ್ರೀನಿವಾಸ್ ಹೇಳಿಕೆ

ಐಷಾರಾಮಿ ಜೀವನ ಶೈಲಿಯಿಂದ ಅನಾರೋಗ್ಯ

Published:
Updated:
Prajavani

ಕೋಲಾರ: ‘ಯುವಕ ಯುವತಿಯರು ಗೊಂದಲಕಾರಿ ವಿಚಾರಗಳಿಗೆ ಒತ್ತು ನೀಡದೆ ಸಮಾಜದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಆರ್.ಶ್ರೀನಿವಾಸ್ ಸಲಹೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ರೋವರ್ ಘಟಕದ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಸಮಾಜದಲ್ಲಿ ಬದಲಾಗುತ್ತಿರುವ ಪದ್ಧತಿಯು ಯುವಕ ಯುವತಿಯರ ಜೀವನ ಶೈಲಿ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕು’ ಎಂದು ಹೇಳಿದರು.

‘ಪಠ್ಯೇತರ ಮತ್ತು ಪಠ್ಯ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಬೇಕು. ಮಕ್ಕಳಿಗೆ ಆಸಕ್ತಿಯಿರುವ ರಂಗದಲ್ಲಿ ಮುಂದುವರಿಯಲು ಪೋಷಕರು ಸಹಕಾರ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಕ್ರೀಡೆಯು ಜೀವನದ ಅವಿಭಾಜ್ಯ ಅಂಗ. ಬೇರೆ ದೇಶಗಳಿಗೆ ಹೊಲಿಸಿದರೆ ಭಾರತದಲ್ಲಿ ಸಾಕಷ್ಟು ಮಂದಿ ನಿರಂತರವಾಗಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಐಷಾರಾಮಿ ಜೀವನ ಶೈಲಿ, ಬದಲಾದ ಆಹಾರ ಪದ್ಧತಿಯಿಂದ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ. ಈ ಹಿಂದೆ ಹಿರಿಯರು ಶ್ರಮಪಟ್ಟು ಕೆಲಸ ಮಾಡುತ್ತಿದ್ದರಿಂದ ಆರೋಗ್ಯವಂತರಾಗಿರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬೀದಿ ಬೀದಿಯಲ್ಲೂ ಬಾರ್, ರೆಸ್ಟೋರೆಂಟ್‌ಗಳ ತಲೆ ಎತ್ತಿವೆ. ಇದಕ್ಕೆ ಅನುಗುಣವಾಗಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ವಿಷಾದಿಸಿದರು.

‘ಸಾಂಪ್ರದಾಯಿಕ ಕಲೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಈ ನೆಲದ ಕಲೆ, ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ವಿ.ವಿ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಪ್ರತಿ ಕಾಲೇಜಿನಲ್ಲೂ ಎನ್‌ಸಿಸಿ, ಎನ್‌ಎಸ್‌ಎಸ್‌, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ದಳ ರಚಿಸುವಂತೆ ಸೂಚಿಸುತ್ತೇವೆ’ ಎಂದು ತಿಳಿಸಿದರು.

ಮುಖ್ಯ ಧ್ಯೇಯ: ‘ದೇಶದ ಭವಿಷ್ಯ ವಿದ್ಯಾರ್ಥಿಗಳ ಮೇಲಿದ್ದು, ಸಮಾಜದಲ್ಲಿ ಶಾಶ್ವತವಾಗಿ ಹೆಸರು ಉಳಿಸುವ ಕೊಡುಗೆ ನೀಡಬೇಕು’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಹೇಳಿದರು.

‘ದೇಶ ಪ್ರೇಮ, ಶಿಸ್ತು, ಪ್ರಾಮಾಣಿಕತೆ, ಸಂಘಟನೆ, ಸೇವೆಯೇ ಸಂಸ್ಥೆಯ ಮುಖ್ಯ ಧ್ಯೇಯ. ಸಂಸ್ಥೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದರ ಜತೆಗೆ ಸದಸ್ಯತ್ವ ನೀಡಬೇಕು. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು. ಸ್ವಾರ್ಥ ಮನೋಭಾವ ಬಿಟ್ಟು ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ.ಮಧುಲತಾ ಮೋಸಸ್, ಕ್ರೀಡಾ ನಿರ್ದೇಶಕ ಪ್ರೊ.ಆರ್.ಶಶಿಧರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಂಕರಪ್ಪ, ಉರ್ದು ವಿಭಾಗದ ಮುಖ್ಯಸ್ಥ ಫಕ್ರುದ್ದೀನ್‌, ಸಾಂಸ್ಕೃತಿಕ ಸಮಿತಿ ನಿರ್ದೇಶಕ ಪ್ರೊ.ಎಂ.ಶ್ರೀನಿವಾಸಮೂರ್ತಿ, ರೋವರ್‌ ಲೀಡರ್ ಪ್ರೊ.ಎಚ್.ಇ.ರವಿಕುಮಾರ್, ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ.ಎಂ.ಕೃಷ್ಣಪ್ಪ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗಶೇಖರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)