ಗುರುವಾರ , ಸೆಪ್ಟೆಂಬರ್ 16, 2021
29 °C
ಮರೆಯಲಾಗದ ಅಪ್ರತಿಮ ಮೈತ್ರಿ ಪ್ರಜ್ಞೆ: ಸಾಹಿತಿ ಕುಪ್ನಳ್ಳಿ ಬೈರಪ್ಪ ಬಣ್ಣನೆ

ಸಿದ್ದಲಿಂಗಯ್ಯ ಭೀಮಪ್ರಜ್ಞೆ ಬೆಳಗಿದ ಮಹಾಕವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕವಿ ಸಿದ್ದಲಿಂಗಯ್ಯ ಅವರು ಕನ್ನಡ ಕಾವ್ಯಯಾನಕ್ಕೆ ಪಾರಂಪರಿಕ ಜನಪದ ಸತ್ವ ಮತ್ತು ಆಧುನಿಕ ವೈಚಾರಿಕ ತತ್ವವನ್ನು ಸ್ಪರ್ಶಗೊಳಿಸಿ ಭೀಮಪ್ರಜ್ಞೆ ಬೆಳಗಿದ ಮಹಾಕವಿ’ ಎಂದು ಸಾಹಿತಿ ಹಾಗೂ ಸಂಶೋಧಕ ಕುಪ್ನಳ್ಳಿ ಎಂ.ಬೈರಪ್ಪ ಬಣ್ಣಿಸಿದರು.

ತಥಾಗತ ಭಗವಾನ್ ಬುದ್ಧದಮ್ಮ ಪ್ರಚಾರ ಸಮಿತಿಯು ಕವಿ ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಿದ್ದಲಿಂಗಯ್ಯ ಅವರು ಕನ್ನಡ ಕಾವ್ಯಭೂಮಿಯ ಮೇಲೆ ಕಾಲಕಾಲಕ್ಕೆ ಸಾಹಿತ್ಯದ ಮಳೆ ಸುರಿಸಿದ್ದಾರೆ. ಹಾಗೇ ಕಾಲವೊಂದಕ್ಕೆ ಸರಿಯಾಗಿ ಸುರಿದ ಕಾವ್ಯಮಳೆಗಳಲ್ಲಿ ‘ಸಿದ್ಧಮಳೆ’ಯು ಕನ್ನಡ ಕಾವ್ಯಭೂಮಿಗೆ ಹೊಸ ಚೈತನ್ಯ ನೀಡಿದೆ’ ಎಂದರು.

‘ದಲಿತ, ಬಂಡಾಯ ಹೋರಾಟದಲ್ಲಿ ಭಾಗವಹಿಸಿದ ಗ್ರಾಮ ಲೋಕದ ಅಸಂಖ್ಯ ಕ್ರಾಂತಿ ಜೀವಿಗಳಿಗೆ ಜಾನಪದದಂತೆ ಗುರು ಪದವಾದವರು ಸಿದ್ದಲಿಂಗಯ್ಯ. ಅವರು ಅಕ್ಷರಸ್ಥರ ಲೋಕಕ್ಕೆ ಜನಪರತೆಯ ಅರಿವಿತ್ತ ಸೃಜನಶೀಲ ಶಕ್ತಿ. ತಮ್ಮ ನುಡಿ ಕಿಡಿಗಳ ಮೂಲಕ ನೊಂದವರ ಬೆವರ ಹನಿ ಬೆಂಕಿಯಾಗಿ ಸಿಡಿಯುವಂತೆ ಮಾಡಿದ ಪ್ರಜ್ಞಾ ಪ್ರವಾಹ. ನೂರಾರು ಕವಿ ಮನಗಳನ್ನು ಕಾವ್ಯಭೂಮಿಗೆ ಇಳಿಸಿದ ಸ್ಫೂರ್ತಿ’ ಎಂದು ಸ್ಮರಿಸಿದರು.

‘ಅವರ ಕಾವ್ಯ ಪ್ರಯೋಗದಲ್ಲಿ ಈ ನೆಲದ ದುಡಿಮೆಗಾರರ ದಮನಿತ ಅಸ್ಮಿತೆ ಮತ್ತು ಅಪಾರ ಅನುಭವದ ಅನುಸಂಧಾನವಿದೆ. ಅವರ ಸಾಹಿತ್ಯ ಸೃಜನೆಯನ್ನು ಬಗೆದಷ್ಟೂ ನೆಲ ಸಂಸ್ಕೃತಿ ತಿಳಿವು ಇಮ್ಮಡಿಯಾಗುತ್ತದೆ. ನಾಡ ನಡುವಿನಿಂದ ಸಿಡಿದ ನೋವಿನ ಕೂಗು ಕೇಳಿಸುವಂತೆ ತಮ್ಮ ಕಾವ್ಯವನ್ನು ನುಡಿದು ನಡೆದು ಜನಮಾನಸದಲ್ಲಿ ಅವರು ಶಾಶ್ವತವಾಗಿ ಉಳಿದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಸಿದ್ದಲಿಂಗಯ್ಯ ಅವರು ದಲಿತತ್ವದ ಸೀಮೆಯಿಂದ ಆರಂಭವಾಗಿ ಮಾನವತ್ವದ ನೆಲೆಗೆ ದಾಟಿದ ‘ಸೀಮಾತೀತ ಸಿದ್ಧ ಸಾಹಿತ್ಯ’. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಹರಿಯುವಂತೆ ಅಕ್ಷರದ ಹನಿಹನಿಯಲ್ಲಿ ಕ್ರಾಂತಿ ಮತ್ತು ಕಾರುಣ್ಯ ಸಂಗಮದ ಕಾವ್ಯ ಕೃಷಿ ಮಾಡಿ ಬಡವರ ಬದುಕು ಬೆಳಗಿದ ಕನ್ನಡದ ಮಹಾಕವಿ. ಅವರ ಕ್ರಾಂತಿಯಾನದಲ್ಲಿ, ಕಾವ್ಯಯಾನದಲ್ಲಿ ಅವರೇ ಒಂದು ಮಹಾ ಕಾವ್ಯದಂತೆ ಕಂಗೊಳಿಸುತ್ತಾರೆ. ಕನ್ನಡ ಸಾರಸ್ವತ ನೆಲವು ಎಂದೂ ಮರೆಯಲಾಗದ ಅಪ್ರತಿಮ ಮೈತ್ರಿ ಪ್ರಜ್ಞೆ ಸಿದ್ದಲಿಂಗಯ್ಯ’ ಎಂದರು.

ಸಮಾನತೆಯ ಆಶಯ: ‘ಸಿದ್ದಲಿಂಗಯ್ಯ ಅವರಿಗಿದ್ದ ಸಾಮಾಜಿಕ ಬದ್ಧತೆ ಮೂಲಕ ಸಮಾನತೆಯ ಆಶಯವನ್ನು ಏಕಲವ್ಯ, ಪಂಚಮ ನಾಟಕದಲ್ಲಿ ಪಾತ್ರ ಸನ್ನಿವೇಶಕ್ಕೆ ತಂದಿದ್ದಾರೆ. ಪ್ರತಿ ಪಾತ್ರಗಳ ವಿವಿಧತೆಯನ್ನು ವಿವರವಾಗಿ ತಿಳಿಸಿಕೊಟ್ಟರು. ದಲಿತ ಸಂಘರ್ಷ ಸಮಿತಿಯ ಆರಂಭದ ಮುಂಚೂಣಿ ನಾಯಕರಲ್ಲಿ ಅತಿ ಪ್ರಮುಖರು’ ಎಂದು ಉಪನ್ಯಾಸಕಿ ಎಚ್‌.ಎನ್‌.ಪುಷ್ಪಲತಾ ಹೇಳಿದರು.

‘ಈ ಹೊತ್ತಿನಲ್ಲಿ ದಲಿತ ಹೋರಾಟಗಳು ಮತ್ತು ಲೆಕ್ಕವಿಲ್ಲದಷ್ಟು ದಲಿತ ಸಂಘಟನೆಗಳು ತಲೆಯೆತ್ತಿ ಅಸಂಖ್ಯಾತ ಕಾರ್ಯಕರ್ತರಿದ್ದರೂ ಚಳವಳಿಗಳು ವಿಫಲವಾಗುತ್ತಿವೆ. ಇದಕ್ಕೆ ಅಂಬೇಡ್ಕರ್‌ರ ತತ್ವ ಸಿದ್ಧಾಂತಗಳ ಅರಿವಿನ ಕೊರತೆ ಕಾರಣ. ಮೊದಲು ಅಂಬೇಡ್ಕರ್‌ ಬಗ್ಗೆ ಅರವು ಮೂಡಿಸಿಕೊಂಡು ಮುನ್ನೆಡೆಯಬೇಕು’ ಎಂದು ದಲಿತ ಮುಖಂಡ ಟಿ.ವಿಜಯ್‌ಕುಮಾರ್ ಸಲಹೆ ನೀಡಿದರು.

ಸಾಹಿತಿ ನಾ.ವೆಂಕಿ, ತಥಾಗತ ಭಗವಾನ್ ಬುದ್ಧದಮ್ಮ ಪ್ರಚಾರ ಸಮಿತಿ ಅಧ್ಯಕ್ಷ ಎನ್.ಸುಬ್ಬರಾಯಪ್ಪ, ಕಾರ್ಯದರ್ಶಿ ಕೃಷ್ಣಯ್ಯ, ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ಕಲಾವಿದ ವೆಂಕಟಾಚಲಪತಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.